ದೇಶದ್ರೋಹದ ಆರೋಪ: ಕೇರಳದ ಇಬ್ಬರು ವಿದ್ಯಾರ್ಥಿಗಳ ಬಂಧನ

Update: 2019-02-22 16:25 GMT

ಮಲಪ್ಪುರ, ಫೆ. 22: ಕಾಶ್ಮೀರ ಹಾಗೂ ಮಣಿಪುರಕ್ಕೆ ಸಾರ್ವಭೌಮತ್ವ ಕೋರಿ ಕಾಲೇಜೊಂದರ ಕ್ಯಾಂಪಸ್‌ ನಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ ಆರೋಪದಲ್ಲಿ ಕೇರಳ ಮಲಪ್ಪುರದ ಇಬ್ಬರು ವಿದ್ಯಾರ್ಥಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ ಇದುವರೆಗೆ ಈ ಕಾಲೇಜಿನಿಂದ ಕನಿಷ್ಠ 7 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕಾಲೇಜಿನಲ್ಲಿ ಬಿಕಾಂ ಕಲಿಯುತ್ತಿರುವ ರಿನ್ಶಾದ್ ಹಾಗೂ ಫಾರಿಸ್ ರ್ಯಾಡಿಕಲ್ ಸ್ಟೂಡೆಂಟ್ಸ್ ಫೋರಂ ಎಂದು ಕರೆಯಲಾಗುವ ವಿದ್ಯಾರ್ಥಿಗಳ ಸಂಘಟನೆಯ ಭಾಗವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹಲವು ರಾಜ್ಯಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಸಂಘ ಪರಿವಾರದ ವಿರುದ್ಧ ಅವರು ಪ್ರತಿಭಟನೆಗಳನ್ನು ನಡೆಸುತ್ತಿದ್ದರು ಎಂದು ಬಂಧಿತ ವಿದ್ಯಾರ್ಥಿಗಳ ಸಹಪಾಠಿಗಳು ತಿಳಿಸಿದ್ದಾರೆ.

 ‘ಕಾಶ್ಮೀರ ವಿಮೋಚನೆ’, ‘ಮಣಿಪುರ ವಿಮೋಚನೆ’, ‘ಪ್ಯಾಲೆಸ್ತೀನ್ ವಿಮೋಚನೆ’ ಎಂಬ ಪೋಸ್ಟರ್‌ಗಳನ್ನು ವಿದ್ಯಾರ್ಥಿಗಳು ಅಂಟಿಸಿದ್ದರು. ಈ ಹಿನ್ನೆಲೆಯಲ್ಲಿ ನಾವು ದೂರು ಸ್ವೀಕರಿಸಿದ್ದೆವು. ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಸಂಘ ಪರಿವಾರದ ವಿರುದ್ಧ ಮಾತನಾಡಿರುವುದಕ್ಕೆ ನಾವು ಪ್ರಕರಣ ದಾಖಲಿಸಿಲ್ಲ ಎಂದು ಮಲಪ್ಪುರದ ಉಪ ಪೊಲೀಸ್ ಆಯುಕ್ತ ಜಲೀಲ್ ತೋಟ್ಟತ್ತಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News