ಎಚ್-1ಬಿ ವೀಸಾದಾರರ ಸಂಗಾತಿಗಳ ಕೆಲಸದ ಹಕ್ಕನ್ನು ಕಸಿಯುವ ಪ್ರಸ್ತಾವ ಅಂತಿಮ

Update: 2019-02-22 16:06 GMT

ವಾಶಿಂಗ್ಟನ್, ಫೆ. 22: ಕೆಲವು ಮಾದರಿಗಳ ಎಚ್-1ಬಿ ವಿದೇಶಿ ಉದ್ಯೋಗ ವೀಸಾಗಳಿಗೆ ಕೆಲಸ ಮಾಡಲು ಅವಕಾಶ ನಿರಾಕರಿಸುವ ಉದ್ದೇಶದಿಂದ, ಪ್ರಸಕತ ಜಾರಿಯಲ್ಲಿರುವ ನಿಯಮಗಳಿಗೆ ಸೂಚಿಸಲಾಗಿರುವ ಮಾರ್ಪಾಡುಗಳನ್ನು ಶ್ವೇತಭವನ ಔಪಚಾರಿಕವಾಗಿ ಸ್ವೀಕರಿಸಿದೆ.

ಈ ಕ್ರಮವು ಎಚ್-1ಬಿ ವೀಸಾದಾರರ 90,000ಕ್ಕೂ ಅಧಿಕ ಸಂಗಾತಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ಪೈಕಿ ಹೆಚ್ಚಿನವರು ಭಾರತೀಯರು.

ಮಾರ್ಪಾಡು ಪ್ರಸ್ತಾವಗಳನ್ನು ಆಂತರಿಕ ಭದ್ರತೆ ಇಲಾಖೆಯು ಶ್ವೇತಭವನದ ಬಜೆಟ್ ನಿರ್ವಹಣೆ ಕಚೇರಿಗೆ ಬುಧವಾರ ಕಳುಹಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಷಯದಲ್ಲಿ ಔಪಚಾರಿಕ ಆದೇಶ ಹೊರಬೀಳುವ ಮೊದಲು ಶ್ವೇತಭವನ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಔಪಚಾರಿಕ ಆದೇಶ ಹೊರಬಿದ್ದ ಬಳಿಕ, ಈ ವಿಷಯವನ್ನು ಆಂತರಿಕ ಭದ್ರತಾ ಇಲಾಖೆಯು ಫೆಡರಲ್ ನ್ಯಾಯಾಲಯವೊಂದಕ್ಕೆ ಗಮನಕ್ಕೆ ತರಲಿದೆ. ಈ ನ್ಯಾಯಾಲಯದಲ್ಲಿ ಈ ಕುರಿತ ಮೊಕದ್ದಮೆಯೊಂದು ಬಾಕಿಯಿದೆ.

ಈಗ ಶ್ವೇತಭವನವು ಪ್ರಸ್ತಾಪಿತ ತಿದ್ದುಪಡಿಗೆ ಸಂಬಂಧಿಸಿ ಅಂತಿಮ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಮೊದಲು, ತನ್ನದೇ ಆದ ಪರಿಶೀಲನೆ ನಡೆಸುತ್ತದೆ ಹಾಗೂ ವಿವಿಧ ಸಂಸ್ಥೆಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News