10 ಕಿ.ಮೀ. ಮೆಟ್ಟಿಲೇರಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಹುಲ್

Update: 2019-02-22 16:09 GMT

ಹೈದರಾಬಾದ್, ಫೆ. 22: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಆಂಧ್ರಪ್ರದೇಶ ತಿರುಮಲದ ವೆಂಕಟರಮಣ ದೇವಾಲಯಕ್ಕೆ 10 ಕಿ.ಮೀ. ಮೆಟ್ಟಿಲೇರಿ ಸಾಗಿ ಪ್ರಾರ್ಥನೆ ಸಲ್ಲಿಸಿದರು.

ರಾಹುಲ್ ಗಾಂಧಿ ಅವರ ಜೊತೆಗೆ ಸೋದರಳಿಯ ರೈಹಾನ್ ಅಲ್ಲದೆ ಪಕ್ಷದ ಹಿರಿಯ ನಾಯಕ ಊಮನ್ ಚಾಂಡಿ, ಟಿ. ಸುಬ್ಬರಾಮಿ ರೆಡ್ಡಿ ಹಾಗೂ ಜೆ.ಡಿ. ಸಲೀಂ ಇದ್ದರು. ದೇವಾಲಯದ ಅಧಿಕಾರಿಗಳು ರಾಹುಲ್ ಗಾಂಧಿಯನ್ನು ಮುಖ್ಯ ದ್ವಾರದಲ್ಲಿ ಸ್ವಾಗತಿಸಿದರು. ರಾಹುಲ್ ಗಾಂಧಿ ಹಾಗೂ ಇತರರು ದೇವಾಲಯದ ತುದಿ ತಲುಪಲು 2 ಗಂಟೆ ಬೇಕಾಯಿತು. ಅನಂತರ ರಾಹುಲ್ ಗಾಂಧಿ ಅವರು ಬೆಟ್ಟದ ತುದಿಯಲ್ಲಿರುವ ತಿರುಮಲ ತಿರುಪತಿ ದೇವಸ್ವಂ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದರು. ಬಳಿಕ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಾರ್ಥನೆ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಅವರಿಗೆ ಪವಿತ್ರ ರೇಶ್ಮೆ ಬಟ್ಟೆ, ಪ್ರಸಾದ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅವರು ಸುಮಾರು 20 ನಿಮಿಷಗಳ ಕಾಲ ದೇವಾಲಯದಲ್ಲಿ ಕಳೆದರು. ಅವರ ಭೇಟಿಯ ಹಿನ್ನೆಲೆಯಲ್ಲಿ ಕೆಳಗಿನಿಂದ ದೇವಾಲಯದ ತುದಿವರೆಗೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ರಾಹುಲ್ ಗಾಂಧಿ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಸಮೀಪದಲ್ಲಿರುವ ಶ್ರೀ ವೆಂಕಟರಮಣ ವಿಶ್ವವಿದ್ಯಾನಿಲಯದ ಕ್ರೀಡಾಂಗಣಕ್ಕೆ ತೆರಳಿದರು.

ಪಕ್ಷದ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ತಿರುಪತಿಗೆ ಭೇಟಿ ನೀಡುತ್ತಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸಿಯಡಿ ಮೇಯಪ್ಪನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News