ಸಂಸದೀಯ ಸಮಿತಿಯೆದುರು ಸಿಇಒ ಹಾಜರಾಗುವುದಿಲ್ಲ: ಟ್ವಿಟರ್ ಹೇಳಿಕೆ

Update: 2019-02-22 16:12 GMT

ಹೊಸದಿಲ್ಲಿ, ಫೆ.22: ಫೆ.25ರಂದು ನಡೆಯುವ ಸಂಸದೀಯ ಸಮಿತಿಯ ಸಭೆಯಲ್ಲಿ ಟ್ವಿಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್ ಡೋರ್ಸೆ ಭಾಗವಹಿಸುವುದಿಲ್ಲ. ಅವರ ಬದಲು ಸಾರ್ವಜನಿಕ ಕಾರ್ಯನೀತಿ ವಿಭಾಗದ ಮುಖ್ಯಸ್ಥ ಕಾಲಿನ್ ಕ್ರೊವೆಲ್ ಭಾಗವಹಿಸುತ್ತಾರೆ ಎಂದು ಟ್ವಿಟರ್ ತಿಳಿಸಿದೆ.

ಫೆ.11ರಂದು ನಡೆದಿದ್ದ ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಸಭೆಯು ಟ್ವಿಟರ್‌ನ ಕಿರಿಯ ಅಧಿಕಾರಿಗಳನ್ನು ಭೇಟಿಯಾಗಲು ಒಪ್ಪಿರಲಿಲ್ಲ ಮತ್ತು ಫೆ.25ರಂದು ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಟ್ವಿಟರ್ ಸಿಇಒ ಜಾಕ್ ಡೋರ್ಸೆಗೆ ಸಮನ್ಸ್ ಜಾರಿಗೊಳಿಸಿತ್ತು. ಮುಂಬರುವ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸಿಕೊಳ್ಳುವ ಸಾಧ್ಯತೆ ಹಾಗೂ ಜನರ ಮಾಹಿತಿ ಗೌಪ್ಯತೆಯ ರಕ್ಷಣೆಯ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಈ ಸಭೆ ಆಯೋಜಿಸಲಾಗಿದೆ. ದೇಶದಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾರರನ್ನು ಪ್ರಭಾವಿತಗೊಳಿಸಲು ಅನುಚಿತ ರೀತಿಯಲ್ಲಿ ಯತ್ನಿಸುವುದರ ವಿರುದ್ಧ ಈಗಾಗಲೇ ಸರಕಾರ ಸಾಮಾಜಿಕ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ.

ಟ್ವಿಟರ್ ಸಿಇಒ ಅಥವಾ ಭಾರತದಲ್ಲಿ ಟ್ವಿಟರ್‌ನ ಕಾರ್ಯನಿರ್ವಹಣೆಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಹಿರಿಯ ಅಧಿಕಾರಿಯ ಅಭಿಪ್ರಾಯವನ್ನು ಮಾತ್ರ ಆಲಿಸಲು ಫೆ.11ರಂದು ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಯ ದುರುಪಯೋಗದ ವಿರುದ್ಧ ಕಠಿಣ ನಿಲುವು ತಳೆದಿರುವ ಕೇಂದ್ರ ಸರಕಾರ , ಐಟಿ ಕಾಯ್ದೆಗೆ ತಿದ್ದುಪಡಿ ತಂದು ಸುಳ್ಳು ಸುದ್ದಿಗಳ ನಿಗ್ರಹ ಹಾಗೂ ಆ್ಯಪ್‌ಗಳ ಕುರಿತ ಹೊಣೆಗಾರಿಕೆಯನ್ನು ಹೆಚ್ಚಿಸಲು ಪ್ರಸ್ತಾವ ಮಾಡಿದೆ. ತಮ್ಮ ವೇದಿಕೆಯಲ್ಲಿ ಪ್ರದರ್ಶಿಸುವ ರಾಜಕೀಯ ಜಾಹೀರಾತುಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದಾಗಿ ಟ್ವಿಟರ್ ಮತ್ತು ಗೂಗಲ್ ಈಗಾಗಲೇ ಭರವಸೆ ನೀಡಿದೆ. ಭಾರತದಲ್ಲಿ ಪ್ರಾಮಾಣಿಕ ಚುನಾವಣಾ ಕಾರ್ಯವನ್ನು ಮುನ್ನಡೆಸಲು ತಾನು ಆಂತರಿಕ ತಂಡವೊಂದನ್ನು ನೇಮಿಸಿರುವುದಾಗಿ ಗುರುವಾರ ಟ್ವಿಟರ್ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News