ಭಾರತದ ಆಕ್ರಮಣಕ್ಕೆ ಪ್ರತಿಕ್ರಿಯಿಸಲು ಸೇನೆಗೆ ಅಧಿಕಾರ ನೀಡಿದ ಇಮ್ರಾನ್

Update: 2019-02-22 16:15 GMT

 ಇಸ್ಲಾಮಾಬಾದ್, ಫೆ. 22: ಭಾರತ ನಡೆಸಬಹುದಾದ ಯಾವುದೇ ‘ಆಕ್ರಮಣ ಅಥವಾ ದುಸ್ಸಾಹಸಕ್ಕೆ ನಿರ್ಣಾಯಕವಾಗಿ ಹಾಗೂ ಸಮಗ್ರವಾಗಿ’ ಪ್ರತಿಕ್ರಿಯಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಸೇನೆಗೆ ಅಧಿಕಾರ ನೀಡಿದ್ದಾರೆ.

ಪುಲ್ವಾಮ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿಲ್ಲ ಎಂಬುದಾಗಿ ಅವರು ಮತ್ತೊಮ್ಮೆ ಹೇಳಿದ್ದಾರೆ.

40 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ ಪುಲ್ವಾಮ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಭಾರತ ಪಣತೊಟ್ಟಿದೆ ಹಾಗೂ ದಾಳಿಯ ತನಿಖೆಯಲ್ಲಿ ನೆರವು ನೀಡುವ ಇಮ್ರಾನ್ ಖಾನ್‌ರ ಹಿಂದಿನ ಕೊಡುಗೆಯನ್ನು ತಿರಸ್ಕರಿಸಿದೆ.

ಇಸ್ಲಾಮಾಬಾದ್‌ನಲ್ಲಿ ಗುರುವಾರ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಅದೇ ವೇಳೆ, ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಾಗೂ ಲಷ್ಕರೆ ತಯ್ಯಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್‌ನ ಜಮಾಅತುದಅವಾ ಮತ್ತು ಫಲಾಹೆ ಇನ್ಸಾನಿಯತ್ ಫೌಂಡೇಶನ್ ಸಂಘಟನೆಗಳನ್ನು ನಿಷೇಧಿತ ಗುಂಪುಗಳೆಂದು ಘೋಷಿಸಲು ಈ ಸಭೆ ತೀರ್ಮಾನಿಸಿತು.

ಆದಾಗ್ಯೂ, ಪುಲ್ವಾಮ ಭಯೋತ್ಪಾದಕ ದಾಳಿಯ ಹೊಣೆ ಹೊತ್ತಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಯಾವುದೇ ಇಂಗಿತ ಸಭೆಯಲ್ಲಿ ವ್ಯಕ್ತವಾಗಿಲ್ಲ.

ಪ್ಯಾರಿಸ್‌ನಲ್ಲಿ ನಡೆಯಲಿರುವ ಹಣಕಾಸು ಕ್ರಿಯಾ ಕಾರ್ಯಪಡೆಯ ಸಭೆಯನ್ನು ಗಮನದಲ್ಲಿಟ್ಟುಕೊಂಡು ಜಮಾಅತುದಅವಾ ಮತ್ತು ಫಲಾಹೆ ಇನ್ಸಾನಿಯತ್ ಫೌಂಡೇಶನ್ ಸಂಘಟನೆಗಳನ್ನು ನಿಷೇಧಿಸುವ ನಿರ್ಧಾರಗಳನ್ನು ತೆಗೆದುಕೊಂಡಿರುವಂತೆ ಕಂಡು ಬಂದಿದೆ.

ಭಯೋತ್ಪಾದನೆಗೆ ಹಣ ಪೂರೈಕೆಯಾಗುವುದನ್ನು ತಡೆಯಲು ಪಾಕಿಸ್ತಾನ ತೆಗೆದುಕೊಂಡಿರುವ ಕ್ರಮಗಳನ್ನು ಪ್ಯಾರಿಸ್ ಸಭೆ ಪರಿಶೀಲಿಸುತ್ತದೆ.

 ‘ಪೂರ್ಣ ಶಕ್ತಿ’ಯಿಂದ ಪ್ರತಿಕ್ರಿಯೆ: ಪಾಕ್ ಸೇನೆ

ಭಾರತದ ಯಾವುದೇ ಆಕ್ರಮಣಕ್ಕೆ ಪಾಕಿಸ್ತಾನವು ‘ಪೂರ್ಣ ಶಕ್ತಿ’ಯಿಂದ ಪ್ರತಿಕ್ರಿಯಿಸುವುದು ಎಂದು ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್ ಶುಕ್ರವಾರ ಹೇಳಿದ್ದಾರೆ.

‘‘ಯುದ್ಧವನ್ನು ಆರಂಭಿಸುವ ಉದ್ದೇಶ ನಮಗಿಲ್ಲ. ಆದರೆ ನಾವು ಪೂರ್ಣ ಪ್ರಮಾಣದ ಬೆದರಿಕೆಗೆ ಪೂರ್ಣ ಶಕ್ತಿಯಿಂದ ಪ್ರತಿಕ್ರಿಯಿಸುತ್ತೇವೆ. ಆಗ ನೀವು ಅಚ್ಚರಿಗೊಳ್ಳಬಹುದು’’ ಎಂದು ಸೇನೆಯ ಪ್ರಧಾನ ಕಚೇರಿಯಿರುವ ನಗರ ರಾವಲ್ಪಿಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

‘‘ಪಾಕಿಸ್ತಾನದೊಂದಿಗೆ ಆಟವಾಡಬೇಡಿ’’ ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News