ಹೈಬ್ರಿಡ್ ಕಾರ್ ಅನ್ವೇಷಣೆ: ಎಂಐಟಿಇಗೆ ಸಮಗ್ರ ಚಾಂಪಿಯನ್ಸ್ ಟ್ರೋಫಿ

Update: 2019-02-22 17:28 GMT

ಮಂಗಳೂರು, ಫೆ. 22: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ)ದ ಸಹಯೋಗದಲ್ಲಿ ಇಂಪೆರಿಯಲ್ ಸೊಸೈಟಿ ಆಫ್ ಇನ್ನೋವೆಟಿವ್ ಇಂಜಿನಿಯರ್ಸ್ (ಐಎಸ್‌ಐಇ)ಯಿಂದ ಇತ್ತೀಚೆಗೆ ಉತ್ತರಪ್ರದೇಶದ ನೊಯ್ಡೋದಲ್ಲಿರುವ ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ‘ಫಾರ್ಮುಲಾ ಇಂಪೆರಿಯಲ್-ಎಚ್‌ವಿಸಿ’ ಸ್ಪರ್ಧೆಯಲ್ಲಿ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ (ಎಂಐಟಿಇ)ಸಂಸ್ಥೆಯು ಸಮಗ್ರ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಮೂಡುಬಿದಿರೆಯ ಎಂಐಟಿಇ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಐಟಿಇ ಚೇರ್‌ಮನ್ ರಾಜೇಶ್ ಚೌಟ, ರಾಷ್ಟ್ರ ಮಟ್ಟದಲ್ಲಿ ನಡೆದ ಫಾರ್ಮುಲಾ ಇಂಪೀರಿಯಲ್ ಸ್ಪರ್ಧೆಯಲ್ಲಿ ಎಂಐಟಿಇಯ ‘ಟೀಮ್ ಅರವನ್ಸ್’ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳ ಸರಮಾಲೆಯನ್ನೇ ತನ್ನದಾಗಿಸಿಕೊಂಡಿದೆ ಎಂದರು.

ಎಂಐಟಿಇಯ ‘ಟೀಮ್ ಅರವನ್ಸ್’ ತಂಡವು ಒಟ್ಟು ಆರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ‘ಜನರ ಆಯ್ಕೆಯ ಕಾರ್ ಪ್ರಶಸ್ತಿ’, ‘ಅತ್ಯುತ್ತಮ ಆಕ್ಸಲರೇಷನ್’, ಅತ್ಯುತ್ತಮ ಕ್ರಾಸ್ ಪ್ಯಾಡ್’, ‘ಅತ್ಯುತ್ತಮ ಚಾಲಕ’, ಅತ್ಯುತ್ತಮ ಒತ್ತಡ ಸಹಿಷ್ಣುತೆ’ ಪ್ರಶಸ್ತಿ ಸೇರಿದಂತೆ ಸಮಗ್ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡು ಬಂದಿದೆ. ಎಲ್ಲ ಪ್ರಶಸ್ತಿಗಳ ಮೊತ್ತವು 1.5 ಲಕ್ಷ ರೂ. ಆಗಿದ್ದು, ಮೊತ್ತಕ್ಕಿಂತ ವಿದ್ಯಾರ್ಥಿಗಳ ಪ್ರತಿಭೆಗೆ ದೊರೆತ ಪ್ರಶಸ್ತಿಯು ಸಂಸ್ಥೆಗೆ ಭೂಷಣವಾಗಿದೆ ಎಂದರು.

ವಿದ್ಯುಚ್ಛಕ್ತಿ ಚಾಲಿತ ಹೈಬ್ರಿಡ್ ವಾಹನವನ್ನು ಸಂಸ್ಥೆಯ ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿ, ನಿರ್ಮಿಸುವ ಹಲವು ಹಂತದ ಕಠಿಣ ಸವಾಲುಗಳನ್ನು ಒಳಗೊಂಡ ಈ ಪ್ರತಿಷ್ಠಿತ ಸ್ಪರ್ಧೆಯು ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಇಂಜಿನಿಯರಿಂಗ್ ಕೌಶಲಗಳನ್ನು ಪರೀಕ್ಷೆಗೆ ಒಡ್ಡುತ್ತದೆ. ಸಾಂಪ್ರದಾಯಿಕ ಇಂಧನ ಚಾಲಿತ ಐಸಿ ಇಂಜಿನ್ ಮತ್ತು ವಿದ್ಯುಚ್ಛಕ್ತಿ ಚಾಲಿತ ಮೋಟಾರ್ ಎರಡನ್ನೂ ಬಳಸಿ ವಿದ್ಯಾರ್ಥಿ ತಂಡಗಳು ನಿರ್ಮಿಸುವ ಹೈಬ್ರಿಡ್ ವಾಹನಗಳು ಈ ಸ್ಪರ್ಧೆಯ ಹಲವು ವಿಭಾಗಗಳಲ್ಲಿ ಸ್ಪರ್ಧಿಸುತ್ತವೆ ಎಂದರು.

ಫಾರ್ಮುಲಾ ಇಂಪೀರಿಯಲ್-ಎಚ್‌ವಿಸಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆಂದೇ ಮೀಸಲಾಗಿರುವ ರಾಷ್ಟ್ರೀಯ ಮಟ್ಟದ ಫಾರ್ಮುಲಾ ವಾಹನಗಳ ವಿನ್ಯಾಸ ಮತ್ತು ನಿರ್ಮಾಣದ ವಾರ್ಷಿಕ ಸ್ಪರ್ಧೆಯಾಗಿದೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 250 ಇಂಜಿನಿಯರಿಂಗ್ ಕಾಲೇಜುಗಳ 30,000ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಈ ವರ್ಷದ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು ಎಂದರು.

ಎಂಐಟಿಇಯ ‘ಟೀಮ್ ಅರವನ್ಸ್’ ತಂಡವು ವಿವಿಧ ವಿಭಾಗಗಳ 42 ಉತ್ಸಾಹಿ ವಿದ್ಯಾರ್ಥಿಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳಾದ ಮಂಜುನಾಥ್ ಎಸ್. ಮತ್ತು ರೋಹನ್ ಈ ತಂಡದ ನೇತೃತ್ವ ವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಸಿ.ಆರ್. ರಾಜಶೇಖರ್ ಮಾರ್ಗದರ್ಶನದಲ್ಲಿ 2018ರ ಜನವರಿಯಿಂದ ಕಾರ್ಯಾರಂಭ ಮಾಡಿದ ಈ ತಂಡವು ಒಂದು ವರ್ಷದ ನಿರಂತರ ಪ್ರಯತ್ನದ ಮೂಲಕ ಹೈಬ್ರಿಡ್ ವಾಹನವನ್ನು ಅಭಿವೃದ್ಧಿಪಡಿಸುವಲ್ಲಿ ಸಫಲವಾಗಿದೆ ಎಂದು ಹರ್ಷ ವ್ಯಕ್ತಯಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂಐಟಿಇ ಸಂಸ್ಥೆಯ ಪ್ರಾಂಶುಪಾಲ ಈಶ್ವರ ಪ್ರಸಾದ್, ಉಪ ಪ್ರಾಂಶುಪಾಲ ಡಾ.ಸಿ.ಆರ್. ರಾಜಶೇಖರ್ ಉಪಸ್ಥಿತರಿದ್ದರು.

ಹೈಬ್ರಿಡ್ ಕಾರಿನ ವಿಶೇಷತೆ

ಕಾರಿನ ವಿನ್ಯಾಸವನ್ನು ಮೌಲ್ಯಮಾಪನ ಮಾಡುವ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ, ಈ ಹೈಬ್ರಿಡ್ ವಾಹನವನ್ನು ಎಂಐಟಿಇ ಸಂಸ್ಥೆಯ ಆವರಣದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೆಟಿಎಂ-390 ಇಂಜಿನ್ ಮತ್ತು 6 ಕಿ.ವ್ಯಾ. ಸಾಮರ್ಥ್ಯದ ಬಿಎಲ್‌ಡಿಸಿ ಮೋಟಾರ್‌ಗಳನ್ನು ಈ ವಾಹನದಲ್ಲಿ ಅಳವಡಿಸಲಾಗಿದೆ. ಇಂಜಿನ್ ಮತ್ತು ಮೋಟಾರ್‌ಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ಬಳಸಿ ವಾಹನವನ್ನು ಚಾಲನೆ ಮಾಡುವ ಹೈಬ್ರಿಡ್ ವ್ಯವಸ್ಥೆ ಈ ವಾಹನದ ವಿಶೇಷತೆಯಾಗಿದೆ.

ಕ್ಷಮತೆ ಮತ್ತು ಸುರಕ್ಷತೆ ಗಮನದಲ್ಲಿರಿಸಿಕೊಂಡು ಉತ್ಕೃಷ್ಟ ಗುಣಮಟ್ಟದ ಬಿಡಿ ಭಾಗಗಳನ್ನು ಬಳಸಿ ಈ ವಾಹನವನ್ನು ತಯಾರಿಸಲಾಗಿದೆ. ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾರಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅತ್ಯಂತ ವೇಗದ ಕಾರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News