ರಶ್ಯ ಹಸ್ತಕ್ಷೇಪ ಕುರಿತ ಮಲ್ಲರ್ ತನಿಖೆ ಮುಕ್ತಾಯ
Update: 2019-02-22 23:14 IST
ವಾಶಿಂಗ್ಟನ್, ಫೆ. 22: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪದ ಬಗ್ಗೆ ವಿಶೇಷ ವಕೀಲ ರಾಬರ್ಟ್ ಮಲ್ಲರ್ ನಡೆಸುತ್ತಿರುವ ತನಿಖೆ ಮುಕ್ತಾಯ ಹಂತಕ್ಕೆ ಬಂದಿದೆ ಹಾಗೂ ಮುಂದಿನ ವಾರ ಅದು ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ತನಿಖೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹಲವಾರು ಸಂಗಡಿಗರು ಮತ್ತು ಸಲಹೆಗಾರರು ಈಗಾಗಲೇ ಅಪರಾಧಿಗಳಾಗಿ ಹೊರಹೊಮ್ಮಿದ್ದಾರೆ.
ಈ ತನಿಖೆಯನ್ನು ‘ಹಗೆ ಸಾಧನೆ’ ಎಂಬುದಾಗಿ ಬಣ್ಣಿಸಿರುವ ಟ್ರಂಪ್, ಮಲ್ಲರ್‌ರ ವರದಿಯನ್ನು ಬಹಿರಂಗಪಡಿಸುವ ಬಗ್ಗೆ ಅಟಾರ್ನಿ ಜನಲರ್ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
ನಿಯಮಗಳ ಪ್ರಕಾರ, ಮಲ್ಲರ್ ನೂತನ ಅಟಾರ್ನಿ ಜನರಲ್ ವಿಲಿಯಮ್ ಬರ್‌ಗೆ ಗೌಪ್ಯ ವರದಿಯನ್ನು ಸಲ್ಲಿಸುತ್ತಾರೆ. ಯಾರ ವಿರುದ್ಧ ಮೊಕದ್ದಮೆ ಹೂಡಬೇಕು, ಯಾರ ವಿರುದ್ಧ ಬೇಡ ಹಾಗೂ ಯಾಕೆ ಎಂಬ ಸೂಚನೆಗಳನ್ನು ಮಲ್ಲರ್ ತನ್ನ ವರದಿಯಲ್ಲಿ ನೀಡುತ್ತಾರೆ.