ಸಿಮೆಂಟ್ ದರ ಏಕಾಏಕಿಯಾಗಿ ರೂ.50ನಷ್ಟು ಹೆಚ್ಚಳ: ನಿರ್ಮಾಣ ಕೆಲಸಕ್ಕೆ ಮತ್ತೊಂದು ಶಾಕ್!

Update: 2019-02-23 08:33 GMT

 ಮಂಗಳೂರು, ಫೆ.23: ಮರಳು ಸಾಕಷ್ಟು ಪ್ರಮಾಣದಲ್ಲಿ, ಕನಿಷ್ಠ ಬೆಲೆಯಲ್ಲಿ ಲಭ್ಯವಾಗುತ್ತಿಲ್ಲ ಎಂಬ ಕೊರಗಿನ ಮಧ್ಯೆಯೇ, ಮನೆ ಕಟ್ಟಲು ಹೊರಟಿರುವ, ಕಟ್ಟುತ್ತಿರುವ ಬಡ ಕುಟುಂಬಗಳಿಗೆ ಸಿಮೆಂಟ್ ದರ ಏರಿಕೆ ಮತ್ತೊಂದು ಶಾಕ್ ನೀಡಿದೆ.

ಮಾತ್ರವಲ್ಲದೆ, ಕಟ್ಟಡ ನಿರ್ಮಾಣಗಾರರೂ ಆತಂಕ ಪಡುವ ಪರಿಸ್ಥಿತಿ. ಸಿಮೆಂಟ್ ಕಂಪೆನಿಗಳು ಏಕಾಏಕಿಯಾಗಿ 40 ರೂ.ನಿಂದ 50 ರೂ.ವರೆಗೆ ಏರಿಕೆ ಮಾಡಿರುವ ಕಾರಣ ಮರಳಿನ ಜತೆ ಇದೀಗ ಸಿಮೆಂಟ್ ಬಗ್ಗೆಯೂ ಆತಂಕ ಪಡಬೇಕಾದ ಪರಿಸ್ಥಿತಿ ಮನೆ ನಿರ್ಮಾಣಕ್ಕೆ ಹೊರಟವರದ್ದು. ಅಷ್ಟು ಮಾತ್ರವಲ್ಲದೆ, ವೃತ್ತಿಪರ ಕಟ್ಟಡ ನಿರ್ಮಾಣ ಮಾಡುವವರು ಕಂಗಾಲಾಗುತ್ತಿದ್ದಾರೆ.

ಸಿಮೆಂಟ್, ಕಬ್ಬಿಣ, ಇಟ್ಟಿಗೆ, ಮರಳು ಸೇರಿದಂತೆ ಬಹುತೇಕ ಕಟ್ಟಡ ನಿರ್ಮಾಣದ ಎಲ್ಲ ಸಾಮಗ್ರಿಗಳು ತುಟ್ಟಿಯಾಗಿವೆ. ಮರಳು ಲಭ್ಯತೆಯ ಸಮಸ್ಯೆಯಿಂದಾಗಿ ಮನೆ ಕಟ್ಟುವವರು ಹಲವಾರು ತಿಂಗಳ ಕಾಲ ಬವಣೆ ಪಡುವಂತಾಗಿತ್ತು. ಮಾತ್ರವಲ್ಲದೆ, ಕೂಲಿ ಕಾರ್ಮಿಕರು (ಕಟ್ಟಡ ನಿರ್ಮಾಣದಲ್ಲಿ ದುಡಿಯುವವರು), ಕಟ್ಟಡ ನಿರ್ಮಾಣದ ಕಂಟ್ರಾಕ್ಟರುದಾರರು ಕಳೆದ ಐದಾರು ತಿಂಗಳಲ್ಲಿ ಮರಳಿನ ಪೂರೈಕೆ ಸ್ಥಗಿತಗೊಂಡ ಕಾರಣ ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮರಳಿನ ಸಮಸ್ಯೆ ಸುಧಾರಿಸುತ್ತಿದೆ. ಹಿಂದೆ ಸಿಮೆಂಟ್ ಒಂದರ ಬ್ಯಾಗ್ 340 ರೂ.ಗೆ ಲಭ್ಯವಾಗುತ್ತಿದ್ದು, ಇದೀಗ ಈ ದರ 380ಕ್ಕೆ ಏರಿಕೆಯಾಗಿದೆ. ಈ ಏರಿಕೆಯಲ್ಲೂ ಸಾಕಷ್ಟು ಏರುಪೇರುಗಳಾಗುತ್ತಿವೆ. ರೂ.40ರಿಂದ 50ರಷ್ಟು ಏರಿಕೆಯಾಗಿರುವುದ ಬಹುದೊಡ್ಡ ಹೊಡೆತ ನೀಡಿದೆ.

ಸಿಮೆಂಟ್ ದರ ಏರಿಕೆಯಿಂದ ತಮಗೆ ಸರಿಯಾಗಿ ಕೆಲಸವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ವಹಿಸಿಕೊಂಡಿರುವ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸುವಂತಿಲ್ಲ ಎನ್ನುವುದು ಮನೆ ನಿರ್ಮಾಣ ಗುತ್ತಿಗೆ ವಹಿಸುವವರ ಅಳಲು. ಕಟ್ಟಡ ಕಾಮಗಾರಿಗೆ ಬೇಕಾದ ಎಲ್ಲಾ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಆದರೆ ನಿಖರವಾದ ಕಾರಣವನ್ನು ಯಾರೂ ಕೊಡುತ್ತಿಲ್ಲ. ಬೆಲೆ ಏರಿಕೆಗೆ ಕಾರಣವಾಗಿರುವ ಅಂಶಗಳನ್ನು ಕಂಪೆನಿಗಳು ಪ್ರಕಟಿಸಬೇಕು ಎಂಬ ಆಗ್ರಹವನ್ನು ಮುಂದಿಡುತ್ತಾರೆ ಗುತ್ತಿಗೆದಾರರು.


ಒಂದೂವರೆ ತಿಂಗಳಿನಿಂದೀಚೆಗೆ ಏಕಾಏಕಿಯಾಗಿ ಸಿಮೆಂಟ್ ದರ ಹೆಚ್ಚಳವಾಗಿದೆ. ಕಬ್ಬಿಣದ ಬೆಲೆಯಲ್ಲೂ ಏರಿಕೆಯಾಗಿದ್ದು, ನಾವು ಈಗಾಗಲೇ ಆರಂಭಿಸಿರುವ ಮನೆ ನಿರ್ಮಾಣದ ಕೆಲಸಕ್ಕೆ ತೊಂದರೆಯಾಗಿದೆ. ಮರಳು ಸಮರ್ಪಕವಾಗಿ ಸಿಗುತ್ತಿಲ್ಲ. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕಾದ ಒತ್ತಡ ಒಂದೆಡೆಯಾದರೆ, ಆರ್ಥಿಕ ಒತ್ತಡದಿಂದಾಗಿ ಕೆಲಸ ಮಾಡುವವರಿಗೆ ರಜೆ ನೀಡಬೇಕಾದ ಪರಿಸ್ಥಿತಿ. ಎಷ್ಟು ಹಣ ಕೈಯಿಂದ ಹಾಕಲು ಸಾಧ್ಯ.

*ಪ್ರಕಾಶ್ ಶೆಟ್ಟಿ, ಕಂಟ್ರಾಕ್ಟರುದಾರರು, ಮಂಗಳೂರು.


 ಮರಳು ಸಮಸ್ಯೆ ಒಂದೆಡೆಯಾದರೆ ಇದೀಗ ಸಿಮೆಂಟ್ ದರ ಏರಿಕೆಯಿಂದ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದೇವೆ. ಕಂಪೆನಿಗಳೇ ನೇರವಾಗಿ ದರ ನಿಗದಿ ಮಾಡುವಂತಾಗಬಾರದು. ಸರಕಾರ ಸರಿಯಾದ ನಿಯಮವನ್ನು ಈ ನಿಟ್ಟಿನಲ್ಲಿ ತರಬೇಕಿದೆ. ಜನಪ್ರತಿನಿಧಿಗಳು ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕು.

* ವಿಜಯ ವಿಷ್ಣು ಮಯ್ಯ, ಉಪಾಧ್ಯಕ್ಷ ನ್ಯಾಷನಲ್ ಅಸೋಸಿಯೇಶನ್ ಆ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News