ನಮ್ಮ ಹೋರಾಟ ಉಗ್ರರ ವಿರುದ್ಧವೇ ಹೊರತು, ಕಾಶ್ಮೀರಿಗಳ ವಿರುದ್ಧವಲ್ಲ: ಪ್ರಧಾನಿ ಮೋದಿ

Update: 2019-02-23 17:53 GMT

ಟೊಂಕ್(ರಾಜಸ್ಥಾನ),ಫೆ.23: ವಾರದ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರಗಳು ಭುಗಿಲೆದ್ದ ಬಳಿಕ ಶನಿವಾರ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕಾಶ್ಮೀರಿಗಳನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸುವುದರ ವಿರುದ್ಧ ಎಚ್ಚರಿಕೆಯನ್ನು ನೀಡಿದರು.

ಇಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ನಮ್ಮ ಹೋರಾಟವು ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರಿಗಳ ವಿರುದ್ಧವಲ್ಲ. ಕಾಶ್ಮೀರಿಗಳು ಭೀತಿವಾದದಿಂದಾಗಿ ಬಹಳಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾರೆ ಮತ್ತು ದೇಶದ ಉಳಿದ ಭಾಗದ ಜನರು ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು.

ಫೆ.14ರಂದು 40ಕ್ಕೂ ಅಧಿಕ ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಬಲಿ ತೆಗೆದುಕೊಂಡ ಪುಲ್ವಾಮಾ ದಾಳಿಯ ಬಳಿಕ ದೇಶಾದ್ಯಂತ ಕಾಶ್ಮೀರಿಗಳ ಮೆಲೆ ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರದ ಘಟನೆಗಳು ವರದಿಯಾಗಿವೆ. ಇಂತಹ ಘಟನೆಗಳನ್ನು ನಿಲ್ಲಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ 10 ರಾಜ್ಯಗಳಿಗೆ ನಿರ್ದೇಶ ನೀಡಿತ್ತು.

ಪ.ಬಂಗಾಳದಿಂದ ಜಮ್ಮುವರೆಗೆ ಹಲವಾರು ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ತಮಗೆ ಕಿರುಕುಳ ನೀಡುತ್ತಿರುವ ಅಥವಾ ತಮ್ಮ ಮೇಲೆ ಹಲ್ಲೆಗಳು ನಡೆಯುತ್ತಿರುವ ಬಗ್ಗೆ ದೂರಿಕೊಂಡಿದ್ದಾರೆ. ಕಿರುಕುಳದಿಂದ ಪಾರಾಗಲು ನೂರಾರು ಜನರು ಕಾಶ್ಮೀರಕ್ಕೆ ಮರಳಿದ್ದಾರೆ.

ಶನಿವಾರ ಪ್ರಧಾನಿಯರ ಭಾಷಣದವರೆಗೆ ಯಾವುದೇ ಬಿಜೆಪಿ ನಾಯಕರು ಈ ಹಲ್ಲೆಗಳನ್ನು ಸ್ಪಷ್ಟವಾಗಿ ಖಂಡಿಸಿ ಹೇಳಿಕೆಗಳನ್ನು ನೀಡಿರಲಿಲ್ಲ. ಆದರೆ ಮಿತ್ರಪಕ್ಷಗಳಾದ ಶಿರೋಮಣಿ ಅಕಾಲಿ ದಳ ಮತ್ತು ಶಿವಸೇನೆ ಹಲ್ಲೆಗಳನ್ನು ಖಂಡಿಸಿದ್ದವು.

ಕಾಶ್ಮೀರಿಗಳಿಗೆ ಸಾಮಾಜಿಕ ಬಹಿಷ್ಕಾರವನ್ನು ಬೆಂಬಲಿಸಿ ಮೇಘಾಲಯದ ರಾಜ್ಯಪಾಲ ಹಾಗು ಮಾಜಿ ಬಿಜೆಪಿ ನಾಯಕ ತಥಾಗತ ರಾಯ್ ಅವರ ವಿವಾದಾತ್ಮಕ ಟ್ವೀಟ್ ಬಗ್ಗೆ ಕೇಂದ್ರ ಸಚಿವ ರವಿಶಂಕರ ಪ್ರಸಾದ ಅವರನ್ನು ಸುದ್ದಿಗಾರರು ಪ್ರಶ್ನಿಸಿದ್ದಾಗ,ತಾನದನ್ನು ಒಪ್ಪುವುದಿಲ್ಲ. ಅಲ್ಲಿಗೆ ವಿಷಯ ಮುಗಿಯಿತು ಎಂದಷ್ಟೇ ಪ್ರತಿಕ್ರಿಯಿಸಿದ್ದರು.

ಪ್ರಧಾನಿಯವರ ಭಾಷಣಕ್ಕೆ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು,ಪುಲ್ವಾಮಾ ದಾಳಿಯ ಹೊಣೆಯನ್ನು ಪಾಕಿಸ್ತಾನದ ಜೈಶೆ ಮುಹಮ್ಮದ್ ಒಪ್ಪಿಕೊಂಡಿದೆಯಾದರೂ ಆತ್ಮಹತ್ಯಾ ಬಾಂಬರ್ ಘಟನಾ ಸ್ಥಳದಿಂದ ಕೇವಲ 10 ಕಿ.ಮೀ.ದೂರದ ನಿವಾಸಿಯಾಗಿದ್ದ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News