‘ಜಾಗತಿಕ ಶಿಕ್ಷಕ ಪ್ರಶಸ್ತಿ’: 10 ಫೈನಲಿಸ್ಟ್ ಗಳ ಪಟ್ಟಿಯಲ್ಲಿ ಭಾರತದ ಸ್ವರೂಪ್ ರಾವಲ್

Update: 2019-02-23 10:37 GMT

ಲಂಡನ್, ಫೆ.23: ನಟಿ ಮತ್ತು ಜೀವನ ಕೌಶಲ ಶಿಕ್ಷಕಿ ಸ್ವರೂಪ್ ರಾವಲ್ ಅವರು 10 ಲಕ್ಷ ಪೌಂಡ್ ಮೊತ್ತದ ವಾರ್ಕೆ ಫೌಂಡೇಷನ್ ನ ‘ಜಾಗತಿಕ ಶಿಕ್ಷಕ ಪ್ರಶಸ್ತಿ’ಯ ಅಗ್ರ 10 ಫೈನಲಿಸ್ಟ್ ಗಳ ಪಟ್ಟಿಯಲ್ಲಿ ಸೇರಿದ್ದಾರೆ.

ವಿನೂತನ ಹಾಗೂ ವಿಶಿಷ್ಟ ಬೋಧನಾ ವಿಧಾನವನ್ನು ಬಳಸಿ ಭಾರತದಲ್ಲಿ ಸಮಾಜದ ವಿವಿಧ ವರ್ಗಗಳ ಮಕ್ಕಳನ್ನು ತಲುಪಿದ ಸಾಧನೆ ಇವರದ್ದು. ಗುಜರಾತ್‍ನ ಲಾವದ್ ಪ್ರಾಥಮಿಕ ಶಾಲೆಯಲ್ಲಿ ಬೋಧಿಸುತ್ತಿರುವ ರಾವಲ್ ಅವರ ಹೆಸರನ್ನು ಈ ವಾರ್ಷಿಕ ಪ್ರಶಸ್ತಿಗಾಗಿ 179 ದೇಶಗಳ 10 ಸಾವಿರ ನಾಮನಿರ್ದೇಶನಗಳಲ್ಲಿ ಸೇರಿಸಲಾಗಿತ್ತು. ಮುಂದಿನ ತಿಂಗಳು ದುಬೈನ ಗ್ಲೋಬಲ್ ಎಜ್ಯುಕೇಶನ್ ಆ್ಯಂಡ್ ಸ್ಕಿಲ್ ಫೋರಂ ಈ ಪ್ರಶಸ್ತಿ ಪ್ರಕಟಿಸಲಿದೆ.

"ಕೆಲ ವಿಶೇಷ ವ್ಯಕ್ತಿಗಳು ಶಿಕ್ಷಕರ ಕೆಲಸವನ್ನು ಗುರುತಿಸಿ ಗೌರವಿಸುತ್ತಿರುವುದು ನಿಜಕ್ಕೂ ಸಂತಸದ ವಿಚಾರ" ಎಂದು ರಾವಲ್ ಪ್ರತಿಕ್ರಿಯಿಸಿದ್ದಾರೆ.

"ವಿಶ್ವಾದ್ಯಂತ ಶಿಕ್ಷಣ ಸವಾಲಾಗಿ ಪರಿವರ್ತನೆಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ನಡೆಸುವ ಪ್ರಯತ್ನವನ್ನು ಗುರುತಿಸಿ ಗೌರವಿಸಬೇಕು ಎನ್ನುವುದು ನನ್ನ ಬಲವಾದ ನಂಬಿಕೆ. ಈ ಪಟ್ಟಿಯಲ್ಲಿ ಸೇರಿದ ಎಲ್ಲ ಸಹ ಶಿಕ್ಷಕರನ್ನೂ ನಾನು ಅಭಿನಂದಿಸುತ್ತೇನೆ" ಎಂದು ವಿವರಿಸಿದ್ದಾರೆ.

ಮಾಜಿ ಮಿಸ್ ಇಂಡಿಯಾ ಆಗಿರುವ ರಾವಲ್, ನಟ ಪರೇಶ್ ರಾವಲ್ ಅವರ ಪತ್ನಿ. ಮಕ್ಕಳಿಗೆ ಜೀವನ ಕೌಶಲ ಶಿಕ್ಷಣ ನೀಡುವ ಮತ್ತು ಬೋಧನೆಯಲ್ಲಿ ಹೊಸ ವಿಧಾನಗಳನ್ನು ತರುವ ಎರಡು ಉದ್ದೇಶದಿಂದ ಇವರು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News