ಕಾರ್ಖಾನೆಯಲ್ಲಿ ಸ್ಫೋಟ: 10 ಮಂದಿ ಮೃತ್ಯು

Update: 2019-02-23 17:52 GMT

ಭದೋಹಿ,ಫೆ.23: ಭದೋಹಿ ನಗರದಲ್ಲಿ ಅಕ್ರಮವಾಗಿ ಪಟಾಕಿಗಳ ತಯಾರಿಕೆಗಾಗಿ ತೋರಿಕೆಗೆ ನಡೆಸಲಾಗುತ್ತಿದ್ದ ಕಾರ್ಪೆಟ್ ಫ್ಯಾಕ್ಟರಿಯಲ್ಲಿ ಶನಿವಾರ ಅಪರಾಹ್ನ ಭೀಕರ ಸ್ಫೋಟ ಸಂಭವಿಸಿದ್ದು,ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಕಟ್ಟಡದೊಳಗೆ ದಾಸ್ತಾನಿರಿಸಲಾಗಿದ್ದ ಪಟಾಕಿಗಳಿಂದ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಯಿಂದಾಗಿ ಎರಡು ಅಂತಸ್ತುಗಳ ಇಡೀ ಕಟ್ಟಡ ಧರಾಶಾಯಿಯಾಗಿದ್ದು, ಸಮೀಪದಲ್ಲಿಯ ಮೂರು ಮನೆಗಳೂ ಕುಸಿದಿವೆ. ಕಟ್ಟಡಗಳ ಅವಶೇಷಗಳು ಎಲ್ಲೆಂದರಲ್ಲಿ ಹರಡಿಬಿದ್ದಿವೆ. ಫ್ಯಾಕ್ಟರಿಯ ಮಾಲಿಕನನ್ನು ಕಾಲಿಯಾರ್ ಮನ್ಸೂರಿ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದರು.

ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ವಿಧಿವಿಜ್ಞಾನ ತಜ್ಞರು ಮತ್ತು ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಶೇಷಗಳಡಿ ಹಲವರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆಗಳಿದ್ದು,ಸಾವಿನ ಸಂಖ್ಯೆ ಹೆಚ್ಚುವ ಭೀತಿ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News