ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಕೇಂದ್ರಕ್ಕೆ ಸರ್ವಪಕ್ಷಗಳ ಜನಪ್ರತಿನಿಧಿಗಳ ನಿಯೋಗ

Update: 2019-02-23 12:19 GMT

ಮಂಗಳೂರು, ಫೆ.23: ಲಾಭದಲ್ಲಿರುವ ಮಂಗಳೂರು ಮೂಲದ ವಿಜಯ ಬ್ಯಾಂಕನ್ನು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಲು ಮುಂದಾದ ಕೇಂದ್ರ ಸರಕಾರವು ತನ್ನ ನಿರ್ಧಾರವನ್ನು ಬದಲಾಯಿಸಬೇಕು ಎಂದು ಕೋರಲು ಕೇಂದ್ರಕ್ಕೆ ಸರ್ವಪಕ್ಷಗಳ ಜನಪ್ರತಿನಿಧಿಗಳ ನಿಯೋಗ ತೆರಳಲು ನಿರ್ಧಾರ ಕೈಗೊಳ್ಳಲಾಗಿದೆ.

ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ ನೇತೃತ್ವದ ‘ವಿಜಯಾ ಬ್ಯಾಂಕ್ ಉಳಿಸಿ ಹೋರಾಟ ಸಮಿತಿ’ಯು ದ.ಕ. ಮತ್ತು ಉಡುಪಿ ಜಿಲ್ಲೆಯ ಸರ್ವಪಕ್ಷಗಳ ಜನಪ್ರತಿನಿಧಿಗಳು ತನ್ನ ‘ನಿಲುವು’ಗಳನ್ನು ವ್ಯಕ್ತಪಡಿಸುವುದಕ್ಕಾಗಿ ಶನಿವಾರ ನಗರದ ಪುರಭವನದಲ್ಲಿ ಏರ್ಪಡಿಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶಾಸಕ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ ಕೆ., ಮಾಜಿ ಸಚಿವ ಬಿ.ರಮಾನಾಥ ರೈ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್‌ಗಣೇಶ್, ಸಿಪಿಎಂ ಮುಖಂಡರಾದ ಯಾದವ ಶೆಟ್ಟಿ, ಬಾಲಕೃಷ್ಣ, ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕೊಲ್ಲಾಡಿ ಬಾಲಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು.

 *ಮಾತು-ಪ್ರತಿಮಾತು: ಮಾಜಿ ಸಚಿವ ರಮಾನಾಥ ರೈ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರು ಪರಸ್ಪರ ಸ್ವಪಕ್ಷಗಳ ಸಮರ್ಥನೆಗೆ ನಿಂತು ಏಟು-ಎದಿರೇಟು ನೀಡಲು ವೇದಿಕೆಯನ್ನು ಬಳಸಿಕೊಂಡರು.

ರಮಾನಾಥ ರೈ ಮಾತನಾಡಿ, ಕೆಲವರಿಗೆ ಸಮಸ್ಯೆಗಳು ಇತ್ಯರ್ಥವಾಗುವುದು ಇಷ್ಟವಿಲ್ಲ. ಸಮಸ್ಯೆಗಳು ಜೀವಂತವಾಗಿದ್ದರೆ ಮಾತ್ರ ರಾಜಕೀಯ ಬೇಳೆ ಬೇಯಿಸಲು ಸಾಧ್ಯ ಎಂದು ತಿಳಿದುಕೊಂಡಿದ್ದಾರೆ. ವಿಜಯ ಬ್ಯಾಂಕನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮುಲ್ಕಿ ಸುಂದರರಾಮ ಶೆಟ್ಟರ ಹೆಸರನ್ನು ನಗರದ ರಸ್ತೆಗಿಡುವ ವಿಚಾರದಲ್ಲಿ ರಾಜಕೀಯ ಮಾಡಿದವರು ಇದೀಗ ಅವರ ಫೋಟೊವನ್ನು ಬ್ಯಾಂಕಿನಿಂದ ಮೂಲೆಗೆ ಸರಿಸುವಾಗ ವೌನವಾಗಿದ್ದಾರೆ. 2019ರ ಎಪ್ರಿಲ್ 1ರಿಂದ ಅವರ ಫೋಟೋ ಮೂಲೆ ಸೇರಿದರೆ ಅಂದು ನಮ್ಮ ಪಾಲಿಗೆ ಕರಾಳ ದಿನವಾಗಲಿದೆ ಎಂದರು.

ರೈ ಭಾಷಣ ಮುಗಿದ ಬಳಿಕ ವೇದಿಕೆ ಮೇಲೇರಿದ ಶಾಸಕ ವೇದವ್ಯಾಸ ಕಾಮತ್ ತನ್ನ ಮಾತಿನ ಸರದಿ ಬಂದಾಗ, ‘ನಾವು ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡಿದರೆ ಪ್ರಧಾನಿ, ವಿತ್ತ ಸಚಿವರಿಗೆ ತಲುಪುವುದಿಲ್ಲ. ದ.ಕ. ಮತ್ತು ಉಡುಪಿಯ ಬಿಜೆಪಿಯ ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರನ್ನು ಒಗ್ಗೂಡಿಸುವ ಜವಾಬ್ದಾರಿ ನನ್ನದು. ಕಾಂಗ್ರೆಸ್‌ನವರು ಕೂಡ ಸಚಿವರು, ವಿಧಾನ ಪರಿಷತ್ ಸದಸ್ಯರನ್ನು ಒಗ್ಗೂಡಿಸಲಿ. ವಿಜಯಾ ಬ್ಯಾಂಕ್ ಉಳಿಸಿ ಹೋರಾಟ ಸಮಿತಿಯು ಶೀಘ್ರ ದಿನಾಂಕವೊಂದನ್ನು ನಿಗದಿಪಡಿಸಲಿ. ಎಲ್ಲರೂ ವಿಮಾನ ಏರೋಣ. ಸದಾನಂದ ಗೌಡ, ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ ಅವರನ್ನೂ ಒಳಗೊಂಡಂತೆ ಪ್ರಧಾನಿ, ವಿತ್ತ ಸಚಿವರ ಸಹಿತ ಸಂಬಂಧಪಟ್ಟವರನ್ನು ಕಂಡು ಭೇಟಿಯಾಗಿ ಅಹವಾಲು ಸಲ್ಲಿಸೋಣ. ವಿಜಯಾ ಬ್ಯಾಂಕ್ ವಿಲೀನಕ್ಕೆ ವಿರೋಧ ವ್ಯಕ್ತಪಡಿಸೋಣ. ಒಪ್ಪದೇ ಇದ್ದರೆ ಕನಿಷ್ಠ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಜಯಾ ಬ್ಯಾಂಕ್‌ನ ಹೆಸರನ್ನಾದರು ಉಳಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡೋಣ. ಈವರೆಗೆ ಬ್ಯಾಂಕ್ ಉಳಿಸುವಲ್ಲಿನ ಹೋರಾಟ, ಪ್ರತಿಭಟನೆಯಲ್ಲಿ ರಾಜಕೀಯ ನಡೆದಿದೆ. ಇನ್ನು ಹಾಗೇ ಮಾಡದೆ ಸ್ವಾರ್ಥ ಮರೆತು ಸ್ವಾಭಿಮಾನದ ಪ್ರಶ್ನೆ ಎಂದು ಬಗೆದು ರಾಜಕೀಯರಹಿತ ಹೋರಾಟ ಮಾಡೋಣ ಎಂದರು.

ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಗೆ 1991ರಲ್ಲಿ ಕಾಂಗ್ರೆಸ್ ಸರಕಾರ ಬೀಜ ಬಿತ್ತಿತ್ತು. ಅದು ಹೆಮ್ಮರವಾಗಿದೆ. ಬಿಜೆಪಿ ಅದನ್ನು ಅನುಷ್ಠಾನಗೊಳಿಸಲು ಮುಂದಾದಾಗ ಬೀಜ ಬಿತ್ತಿದ್ದನ್ನು ಮರೆತು ವಿಜಯಾ ಬ್ಯಾಂಕನ್ನು ಬಿಜೆಪಿಯೇ ವಿಲೀನಗೊಳಿಸುತ್ತಿದೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು. ಈ ವೇಳೆ ರಮಾನಾಥ ರೈ ಪ್ರತಿಕ್ರಿಯೆ ನೀಡಲು ಮುಂದಾದಾಗ ವೇದವ್ಯಾಸ ಕಾಮತ್, ‘ದಯವಿಟ್ಟು ತಪ್ಪಾಗಿದ್ದರೆ ಕ್ಷಮಿಸಿ, ನೀವು ಹಿರಿಯರು, ಅನುಭವಿಗಳು, ನಾವೆಲ್ಲಾ ಸೇರಿ ವಿಜಯಾ ಬ್ಯಾಂಕ್ ಉಳಿಸೋಣ. ನೀವೇ ನೇತೃತ್ವ ವಹಿಸಿ. ಇದರಲ್ಲಿ ರಾಜಕೀಯ ಬೇಡ’ ಎಂದು ಕೈ ಮುಗಿದು ಭಾಷಣ ಮುಗಿಸಿದರು.

ಆದರೂ ಮತ್ತೆ ಮೈಕ್ ಕೈಗೆತ್ತಿಕೊಂಡ ರಮಾನಾಥ ರೈ, ‘ನಾವಿದರಲ್ಲಿ ರಾಜಕೀಯ ಮಾಡುವುದಿಲ್ಲ. ನಾನೀಗ ಜನಪ್ರತಿನಿಧಿಯೂ ಅಲ್ಲ, ಸಂಸದರು, ಸಚಿವರು, ಶಾಸಕರೇ ನೇತೃತ್ವ ವಹಿಸಿಕೊಂಡು ಮಾಡಬೇಕು’ ಎಂದರಲ್ಲದೆ, ‘ಸುಮ್ಮನೆ ನಮ್ಮ ಮೇಲೆ ಆರೋಪ ಹೊರಿಸುವುದು ಸರಿಯಲ್ಲ’ ಎಂದರು. ಅಷ್ಟರಲ್ಲಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಕೂಡ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದರು. ‘ನಾನು ಈ ವಿಷಯದಲ್ಲಿ ಯಾರೊಂದಿಗೂ ರಾಜಕೀಯ ಮಾಡುವುದಿಲ್ಲ. ವಿಜಯಾ ಬ್ಯಾಂಕ್ ಉಳಿಸಲು ನಾವೆಲ್ಲಾ ಒಂದಾಗೋಣ’ ಎನ್ನುತ್ತಾ ಮುನ್ನೆಡೆದರು.

ಒಟ್ಟಿನಲ್ಲಿ ಮಾತು-ಪ್ರತಿಮಾತು ಕೆಲಕಾಲ ಬಿಸಿ ವಾತಾವರಣ ಸೃಷ್ಟಿಸಿತು. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳ ಕೊರತೆ ಎದ್ದುಕಾಣುತ್ತಿತ್ತು. ವಿಜಯಾ ಬ್ಯಾಂಕ್‌ನ ಅಧಿಕಾರಿ-ನೌಕರರ ವರ್ಗ ಸಾಕಷ್ಟು ಸಂಖ್ಯೆಯಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News