ಅಸ್ಸಾಂ ಕಳ್ಳಭಟ್ಟಿ ದುರಂತ: ಮೃತರ ಸಂಖ್ಯೆ 93ಕ್ಕೆ ಏರಿಕೆ; ತನಿಖೆಗೆ ಆದೇಶ

Update: 2019-02-23 16:48 GMT

ಗುವಾಹತಿ, ಫೆ. 23: ಅಸ್ಸಾಂನ ಗೋಲಾಘಾಟ್ ಹಾಗೂ ಜೊರ್ಹಾತ್ ಜಿಲ್ಲೆಗಳಲ್ಲಿ ಕಳ್ಳಭಟ್ಟಿ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ. ಗೋಲಾಘಾಟ್ ಜಿಲ್ಲೆಯೊಂದರಲ್ಲೇ 39 ಮಂದಿ ಮೃತಪಟ್ಟಿದ್ದಾರೆ ಎಂದು ಅಸ್ಸಾಂನ ಆರೋಗ್ಯ ಇಲಾಖೆ ತಿಳಿಸಿದೆ.

ಕಳ್ಳಭಟ್ಟಿ ಸೇವನೆಯಿಂದ ಗಂಭೀರವಾಗಿರುವ ಕನಿಷ್ಠ 200 ಮಂದಿಯನ್ನು ಜೊರ್ಹಾತ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಗೋಲಾಘಾಟ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉತ್ತರಭಾರತದಲ್ಲಿ ಕಳ್ಳಭಟ್ಟಿ ಸೇವಿಸಿ 100ಕ್ಕೂ ಅಧಿಕ ಜನರು ಮೃತಪಟ್ಟ ಎರಡು ವಾರಗಳ ಒಳಗೆ ಈ ಘಟನೆ ನಡೆದಿದೆ.

ಸಾಲ್ಮರಾ ಚಹಾ ತೋಟದ ಕಾರ್ಮಿಕರು ಗುರುವಾರ ಸಂಜೆ ಕಳ್ಳಭಟ್ಟಿ ಸೇವಿಸಿದರು. ಕೂಡಲೇ ನಾಲ್ಕು ಮಂದಿ ಮಹಿಳೆಯರು ಮೃತಪಟ್ಟರು. ಮುಂದಿನ 12 ಗಂಟೆಗಳಲ್ಲಿ 8 ಮಂದಿ ಮೃತಪಟ್ಟರು. ಈಗ ಒಟ್ಟು ಮೃತಪಟ್ಟವರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 ಚಹಾತೋಟದ ಸಮೀಪದ ಜುಗಿಬಾರಿ ಪ್ರದೇಶದಲ್ಲಿರುವ ಕಳ್ಳಭಟ್ಟಿ ತಯಾರಿಸುವ ಘಟಕದ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಇಂದುಕಲ್ಪ ಬೋರ್ಡೋಲೋಯಿ ಹಾಗೂ ದೇಬಾ ಬೋರಾ ಎಂದು ಗುರುತಿಸಲಾಗಿದೆ. ಕಳ್ಳಭಟ್ಟಿ ದಂಧೆಯಲ್ಲಿ ಪಾಲ್ಗೊಂಡ ಇತರ ವ್ಯಕ್ತಿಗಳನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

‘‘ನಾವು ಈಗಾಗಲೇ ಇಬ್ಬರನ್ನು ಬಂಧಿಸಿದ್ದೇವೆ. ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ.’’ ಎಂದು ಪೊಲೀಸ್ ಉಪ ಅಧೀಕ್ಷಕ ಪಾರ್ಥಾ ಪ್ರತೀಮ್ ಸೈಕಿಯಾ ಅವರು ತಿಳಿಸಿದ್ದಾರೆ.

 ಈ ಪ್ರದೇಶದಲ್ಲಿ ಒಂದು ಗ್ಲಾಸ್ ಸಾರಾಯಿಗೆ 10 ರೂಪಾಯಿಯಿಂದ 20 ರೂಪಾಯಿ ವಿಧಿಸಲಾಗುತ್ತಿದೆ. ಈ ಕಳ್ಳಭಟ್ಟಿ ಸೇವನೆಯಿಂದ ಕಳ್ಳಭಟ್ಟಿ ಮಾರಾಟ ಮಾಡುತ್ತಿದ್ದ ಸಂಜು ಒರಾಂಗ್ ಹಾಗೂ ಅವರ ತಾಯಿ ದ್ರುಪದಿ ಒರಾಂಗ್ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಬಗ್ಗೆ ತನಿಖೆಗೆ ಅಸ್ಸಾಂನ ಅಬಕಾರಿ ಸಚಿವ ಪರಿಮಳ್ ಶುಕ್ಲಬೈದ್ಯ ಅವರು ಆದೇಶಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾರ ಪ್ರದೇಶದ ಇಬ್ಬರು ಅಬಕಾರಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

‘‘ನಾವು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ.’’ ಎಂದು ಗೋಲಾಘಾಟ್ ಉಪ ಆಯುಕ್ತ ಧಿರೇನ್ ಹಝಾರಿಕಾ ತಿಳಿಸಿದ್ದಾರೆ. ಈ ನಡುವೆ ಕಳ್ಳಭಟ್ಟಿ ತಯಾರಿ ಬಗ್ಗೆ ಪರಿಶೀಲನೆ ನಡೆಸದ ರಾಜ್ಯ ಅಬಕಾರಿ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿರುವ ಸಾರಾಯಿ ನಿಷೇಧ ಹೋರಾಟ ಸಮಿತಿ ಅಧ್ಯಕ್ಷ ಪ್ರಬಿನ್ ದಾಸ್ ಮೇಲೆ ಬಿಜೆಪಿ ಕಾರ್ಯಕರ್ತರು ಗೋಲಾಘಾಟ್‌ನಲ್ಲಿ ಹಲ್ಲೆ ನಡೆಸಿದ್ದಾರೆ.

ಇದೆಲ್ಲ ನಡೆದಿರುವುದು ಅಬಕಾರಿ ಇಲಾಖೆ ಹಾಗೂ ಕಳ್ಳಭಟ್ಟಿ ತಯಾರಿಸುವವರ ನಡುವಿನ ನಂಟಿನಿಂದ ಎಂದು ದಾಸ್ ಹೇಳಿದ್ದರು.

ಇನ್ನೊಂದೆಡೆ ಅಸ್ಸಾಂ ಗಣ ಪರಿಷದ್‌ನ ಅಧ್ಯಕ್ಷರು, ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಾಕಷ್ಟು ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News