ಮಾ.4ರಿಂದ ಏಕತಾ ಪ್ರತಿಮೆಗೆ ವಿಶೇಷ ರೈಲು ಸೇವೆ ಆರಂಭ

Update: 2019-02-23 16:56 GMT

ಹೊಸದಿಲ್ಲಿ,ಫೆ.23: ಭಾರತೀಯ ರೈಲ್ವೆಯು ಗುಜರಾತ್‌ನ ಏಕತಾ ಪ್ರತಿಮೆಗೆ ಭೇಟಿ ನೀಡುವ ಪ್ರವಾಸಿಗಳಿಗಾಗಿ ವಿಶೇಷ ರೈಲನ್ನು ಮಾ.4ರಿಂದ ಆರಂಭಿಸಲಿದೆ.

 ಐಆರ್‌ಸಿಟಿಸಿಯ ‘ಭಾರತ ದರ್ಶನ ಪ್ರವಾಸ ಯೋಜನೆ’ಯಡಿ ನಿರ್ವಹಿಸಲಾಗುವ ಈ ಪ್ರವಾಸಿ ರೈಲು ಪ್ರಯಾಣಕ್ಕೆ 7,560 ರೂ.ಗಳ ನಾನ್ ಎಸಿ ಕೋಚ್‌ಗಳಲ್ಲಿ ಏಳು ರಾತ್ರಿಗಳು ಮತ್ತು ಎಂಟು ಹಗಲುಗಳ ಪ್ಯಾಕೇಜ್‌ನ್ನು ನಿಗದಿಗೊಳಿಸ ಲಾಗಿದ್ದು,ಇದರಲ್ಲಿ ವಸತಿ ಮತ್ತು ಆಹಾರ,ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆ,ಭದ್ರತಾ ವ್ಯವಸ್ಥೆ ಇತ್ಯಾದಿಗಳು ಒಳಗೊಂಡಿವೆ. ರೈಲು ಚಂಡಿಗಡದಿಂದ ಪ್ರಯಾಣವನ್ನು ಆರಂಭಿಸಲಿದ್ದು,ಉಜ್ಜೈನ್‌ನ ಮಹಾಕಾಲೇಶ್ವರ ಜ್ಯೋತಿರ್ಲಿಂಗ,ಇಂದೋರ ಬಳಿಯ ಓಂಕಾರೇಶ್ವರ ಜ್ಯೋತಿರ್ಲಿಂಗ,ಶಿರಡಿ ಸಾಯಿಬಾಬಾ ದರ್ಶನ,ನಾಸಿಕ್‌ನ ತ್ರಂಬಕೇಶ್ವರ ಮತ್ತು ಔರಂಗಾಬಾದ್‌ನ ಘೃಷ್ಣೇಶ್ವರ ಜ್ಯೋತಿರ್ಲಿಂಗ ಇವುಗಳನ್ನು ತನ್ನ ಪ್ರವಾಸದಲ್ಲಿ ಒಳಗೊಂಡಿದೆ.

ಪ್ರವಾಸಿಗಳ ಅನುಕೂಲಕ್ಕಾಗಿ ವಿವಿಧ ನಿಲ್ದಾಣಗಳಲ್ಲಿ ಪ್ರವಾಸಿಗಳು ಹತ್ತುವ ಮತ್ತು ಇಳಿಯುವ ಸೌಲಭ್ಯವನ್ನು ಒದಗಿಸಲಾಗಿದೆ.

ರೈಲು ವಡೋದರಾ ನಿಲ್ದಾಣದಲ್ಲಿ ನಿಲ್ಲಲಿದ್ದು,ಅಲ್ಲಿಂದ ಪ್ರವಾಸಿಗಳನ್ನು ಬಸ್‌ಗಳಲ್ಲಿ ಏಕತಾ ಪ್ರತಿಮೆಗೆ ಕರೆದೊಯ್ಯಲಾಗುವುದು ಎಂದು ಸರಕಾರದ ಪ್ರಕಟಣೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News