ಎರಡು ಪ್ರಮುಖ ದೈನಿಕಗಳಿಗೆ ಜಮ್ಮು-ಕಾಶ್ಮೀರ ಸರಕಾರದ ಜಾಹಿರಾತುಗಳು ಸ್ಥಗಿತ: ಎಡಿಟರ್ಸ್ ಗಿಲ್ಡ್

Update: 2019-02-24 07:45 GMT

ಹೊಸದಿಲ್ಲಿ,ಫೆ.23: ಜಮ್ಮು-ಕಾಶ್ಮೀರ ಸರಕಾರವು ಯಾವುದೇ ಕಾರಣವನ್ನು ನೀಡದೆ ಫೆ.16ರಿಂದ ರಾಜ್ಯದ ಎರಡು ಪ್ರಮುಖ ಆಂಗ್ಲ ದೈನಿಕಗಳಾದ ‘ಗ್ರೇಟರ್ ಕಾಶ್ಮೀರ್’ ಮತ್ತು ‘ಕಾಶ್ಮೀರ್ ರೀಡರ್’ಗಳಿಗೆ ಜಾಹೀರಾತುಗಳನ್ನು ಸ್ಥಗಿತಗೊಳಿಸಿದೆ ಎಂದು ತಿಳಿಸಿರುವ ದಿ ಕಾಶ್ಮೀರ್ ‘ಎಡಿಟರ್ಸ್ ಗಿಲ್ಡ್’, ರಾಜ್ಯದಲ್ಲಿಯ ಮಾಧ್ಯಮ ಸಂಸ್ಥೆಗಳನ್ನು ಉಸಿರುಗಟ್ಟಿಸಲು ಮತ್ತು ಬುಡಮೇಲುಗೊಳಿಸಲು ರಾಜ್ಯ ಆಡಳಿತವು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಇನ್ನೂ ಎರಡು ಡಝನ್ ಪತ್ರಿಕೆಗಳು ಭದ್ರತಾ ಸಂಸ್ಥೆಗಳ ನಿಗಾದಲ್ಲಿವೆ ಎಂಬ ಮಾಹಿತಿ ನಮಗೆ ಲಭಿಸಿದೆ. ನಾವು ಸರಕಾರದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದೆವಾದರೂ ಅವರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಗುರುತು ಹೇಳಿಕೊಳ್ಳಲು ಬಯಸದ ಸಂಪಾದಕರೋರ್ವರು ತಿಳಿಸಿದರು.

ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಭಾರತೀಯ ಪತ್ರಿಕಾ ಮಂಡಳಿಯನ್ನು ಕೋರಲು ತಾನು ನಿರ್ಧರಿಸಿರುವುದಾಗಿ ಹೇಳಿರುವ ಗಿಲ್ಡ್, ಮಾಧ್ಯಮಗಳ ಉಸಿರುಗಟ್ಟಿಸದಂತೆ ಕ್ರಮಗಳನ್ನು ತಾನು ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ.

ಮಾಧ್ಯಮಗಳ ಉಸಿರುಗಟ್ಟಿಸುವ ಪ್ರಯತ್ನವು ಕಳೆದ ಮೂರು ದಶಕಗಳಿಗೂ ಅಧಿಕ ಕಾಲದಿಂದ ರಾಜ್ಯದಲ್ಲಿ ನಡೆಯುತ್ತಿರುವುದರ ಮುಂದುವರಿಕೆಯಾಗಿದೆ. ಕಾಶ್ಮೀರದಲ್ಲಿಯ ಮಾಧ್ಯಮಗಳು ಅತ್ಯಂತ ವೃತ್ತಿಪರವಾಗಿದ್ದು, ಜೀವಗಳನ್ನು ಬಲಿಗೊಟ್ಟಾದರೂ ತಮ್ಮ ತಟಸ್ಥತೆಯನ್ನು ಕಾಯ್ದುಕೊಂಡಿವೆ. ಅವು ತಮ್ಮ ಈ ನಿಲುವನ್ನು ಮುಂದುವರಿಸುತ್ತವೆ ಎಂದು ಅದು ಹೇಳಿದೆ.

ಜಮ್ಮು-ಕಾಶ್ಮೀರವು ಡಿಸೆಂಬರ್, 2018ರಿಂದ ರಾಷ್ಟ್ರಪತಿಗಳ ಆಡಳಿತದಲ್ಲಿದೆ.

ತನ್ಮಧ್ಯೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News