ಗೋರಕ್ಷಣೆ ನೆಪದಲ್ಲಿ ಹಿಂಸಾಚಾರ: ಮೂರು ವರ್ಷಗಳಲ್ಲಿ ಕನಿಷ್ಠ 44 ಮಂದಿ ಸಾವು

Update: 2019-02-23 17:19 GMT

ಹೊಸದಿಲ್ಲಿ, ಫೆ. 22: ಭಾರತದಲ್ಲಿ  ಗೋ ರಕ್ಷಕರ ಗುಂಪು ಕಳೆದ ಮೂರು ವರ್ಷಗಳಲ್ಲಿ 44 ಜನರನ್ನು ಹತೈಗೈದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇದಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಂಘ ಪರಿವಾರದ ರಾಜಕಾರಣಿಗಳು ಬೆಂಬಲ ನೀಡಿದ್ದಾರೆ ಎಂದು ‘ಹ್ಯೂಮನ್ ರೈಟ್ಸ್ ವಾಚ್’ನ ವರದಿ ಹೇಳಿದೆ.

 ಈ ವಾರ ಅನಾವರಣಗೊಳಿಸಿರುವ 104 ಪುಟಗಳ ವರದಿಯಲ್ಲಿ ಸಂಘಪರಿವಾರದ ಗೋರಕ್ಷಕರ ದಾಳಿಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಒಟ್ಟು ಮೃತಪಟ್ಟವರಲ್ಲಿ 36 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು. 2015 ಮೇ ಹಾಗೂ 2018 ಡಿಸೆಂಬರ್ ನಡುವೆ ನಡೆದ 100ಕ್ಕೂ ಅಧಿಕ ದಾಳಿಯಲ್ಲಿ 280ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್ ಮೂಲದ ಸಂಸ್ಥೆ ‘ಹ್ಯೂಮನ್ ರೈಟ್ ವಾಚ್’ ತನ್ನ ವರದಿಯಲ್ಲಿ ತಿಳಿಸಿದೆ.

ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳು ಪೂಜಿಸುವ ಗೋವುಗಳನ್ನು ರಕ್ಷಿಸುವ ನೀತಿಗೆ ಬೆಂಬಲಿಸುವ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಸದಸ್ಯರು ಬೀಫ್ ಸೇವನೆ ವಿರುದ್ಧ ನಡೆಸುತ್ತಿರುವ ಅಭಿಯಾನದಿಂದಾಗಿ ಹಿಂಸಾಚಾರ ಸಂಭವಿಸುತ್ತಿದೆ ಎಂದು ಅದು ಹೇಳಿದೆ.

ಮೋದಿ ಅವರು ಈ ಹಿಂದೆ ಗುಂಪು ಹಿಂಸಾಚಾರವನ್ನು ಖಂಡಿಸಿದ್ದರು. ಗೋ ಪೂಜೆಯ ಹೆಸರಲ್ಲಿ ಜನರನ್ನು ಕೊಲ್ಲುವುದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದರು. ಗೋರಕ್ಷಣೆಯ ಹೆಸರಲ್ಲಿ ಗುಂಪು ದಾಳಿ ನಡೆಸುವವರನ್ನು ಅಪರಾಧಿಗಳಿಗಿಂತ ಕಡಿಮೆ ಏನಲ್ಲ ಎಂದು ಹೇಳಿದ್ದ ನರೇಂದ್ರ ಮೋದಿ, ಗೋರಕ್ಷಣೆ ನೆಪದಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸರಕಾರಗಳಿಗೆ ಸೂಚಿಸಿದ್ದರು ಎಂದು ಬಿಜೆಪಿ ಶಾಸಕ ಹಾಗೂ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಬುಧವಾರ ಪಠ್ಯ ಸಂದೇಶದಲ್ಲಿ ವರದಿಗೆ ಪ್ರತಿಕ್ರಿಯೆಯಾಗಿ ಹೇಳಿದ್ದಾರೆ.

ಗೋರಕ್ಷಕರ ಹಿಂಸಾಚಾರ ಗ್ರಾಮೀಣ ಆರ್ಥಿಕತೆ ಮೇಲೆ ಉಂಟು ಮಾಡಿರುವ ಪರಿಣಾಮ ಗುರುತಿಸಿರುವ ವರದಿ, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರ್ಮಿಕ ಸಂಘರ್ಷ ಹೆಚ್ಚುವ ಸಾಧ್ಯತೆ ಇದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News