ಶಿಕ್ಷಣ ಸಾಲ ತೀರಿಸುವುದು ಕಷ್ಟವಾಗುತ್ತಿದೆಯೇ?: ಸುಸ್ತಿದಾರ ಎಂಬ ಹಣೆಪಟ್ಟಿಯನ್ನು ತಡೆಯಲು ಹೀಗೆ ಮಾಡಿ

Update: 2019-02-23 17:40 GMT

ಪ್ರೌಢ ಶಿಕ್ಷಣವಾಗಿರಲಿ ಅಥವಾ ಉನ್ನತ ಶಿಕ್ಷಣವಾಗಿರಲಿ,ವಿದ್ಯಾಭ್ಯಾಸದ ಖರ್ಚು ವರ್ಷಗಳುರುಳಿದಂತೆ ಹೆಚ್ಚುತ್ತಲೇ ಹೋಗುತ್ತಿದೆ. ಇಂದಿನ ದುಬಾರಿ ದಿನಗಳಲ್ಲಿ ಹೆಚ್ಚಿನವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಲು ಶಿಕ್ಷಣ ಸಾಲದ ಮೊರೆ ಹೋಗುತ್ತಿದ್ದಾರೆ. ಆದರೆ ಸಾಲವನ್ನು ಪಡೆದುಕೊಳ್ಳುವುದೇನೋ ಸುಲಭವಾಗಿರಬಹುದು, ಸಕಾಲದಲ್ಲಿ ಅದನ್ನು ಮರುಪಾವತಿಸುವುದು ಮಾತ್ರ ಯಾವಾಗಲೂ ಸುಲಭವಲ್ಲ. ಇತರ ವಿಧಗಳ ಸಾಲಗಳಂತೆ ಶಿಕ್ಷಣ ಸಾಲ ಕೂಡ ಪಡೆದುಕೊಂಡು ಸುಸ್ತಿಯಾದರೆ ಅದು ವಿದ್ಯಾರ್ಥಿಯ ಮಾತ್ರವಲ್ಲ,ಆತನ/ಆಕೆಯ ಪೋಷಕರ ಅಥವಾ ಸಾಲಕ್ಕೆ ಭದ್ರತೆ ನೀಡಿದವರ ಕ್ರೆಡಿಟ್ ಸ್ಕೋರನ್ನು ಹಾಳು ಮಾಡುತ್ತದೆ. ಇದರಿಂದಾಗಿ ಅವರಿಗೆ ಭವಿಷ್ಯದಲ್ಲಿ ಸಾಲ ದೊರೆಯುವ ಸಾಧ್ಯತೆಗಳು ಕ್ಷೀಣಿಸುತ್ತವೆ. ಇಂದು ಹೆಚ್ಚಿನ ಉನ್ನತ ಸಂಸ್ಥೆಗಳು ಉದ್ಯೋಗ ನೀಡುವಾಗ ಅಭ್ಯರ್ಥಿಗಳ ಕ್ರೆಡಿಟ್ ಸ್ಕೋರನ್ನೂ ಪರಿಶೀಲಿಸುತ್ತವೆ. ಹೀಗಾಗಿ ಸಾಲ ತೀರಿಸಲಾಗದೆ ಸುಸ್ತಿಯಾದರೆ ಅದು ಉದ್ಯೋಗಾವಕಾಶಕ್ಕೂ ಕಲ್ಲು ಹಾಕಬಹುದು. ನೀವು ಶಿಕ್ಷಣ ಸಾಲವನ್ನು ಪಡೆದುಕೊಂಡಿದ್ದರೆ ಮತ್ತು ಮಾಸಿಕ ಕಂತು ಮರುಪಾವತಿ ಮಾಡಲು ತೊಂದರೆಗಳನ್ನು ಎದುರಿಸುತ್ತಿದ್ದರೆ ನೀವು ಸಾಲದ ಮರುಹೊಂದಾಣಿಕೆ ಅಥವಾ ಉಳಿಕೆ ಸಾಲದ ವರ್ಗಾವಣೆ ಅಥವಾ ಬ್ಯಾಂಕ್ ಬದಲಾವಣೆಯಂತಹ ವಿವಿಧ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.

►ಸಾಲದ ಮರುಹೊಂದಾಣಿಕೆ

 ಶಿಕ್ಷಣ ಸಾಲದ ಮರುಹೊಂದಾಣಿಕೆಯೆಂದರೆ ಸಾಲದ ಅವಧಿಯನ್ನು ವಿಸ್ತರಿಸುವುದು ಎಂದರ್ಥ. ಬ್ಯಾಂಕು ನಿಮ್ಮ ಕೋರಿಕೆಯನ್ನು ಒಪ್ಪಿಕೊಂಡರೆ ನಿಮಗೆ ಸಾಲವನ್ನು ಮರುಪಾವತಿ ಮಾಡಲು ವಿಸ್ತರಿತ ಅವಧಿ ಲಭಿಸುತ್ತದೆ. ಆದರೆ ಇಂತಹ ವಿಸ್ತರಣೆಗೆ ನೀವು ಬೆಲೆಯನ್ನೂ ತೆರಬೇಕಾಗುತ್ತದೆ. ಶಿಕ್ಷಣ ಸಾಲದ ಅವಧಿ ವಿಸ್ತರಣೆಯ ಜೊತೆಗೆ ಒಟ್ಟು ಬಡ್ಡಿಪಾವತಿಯೂ ಹೆಚ್ಚುತ್ತದೆ,ಹೀಗಾಗಿ ಸಾಲವು ಇನ್ನಷ್ಟು ದುಬಾರಿಯಾಗುತ್ತದೆ. ಕೆಲವು ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮರುಪಾವತಿಯಲ್ಲಿ ವಿಳಂಬ ಮತ್ತು ಸಾಲ ಮರುಹೊಂದಾಣಿಕೆಗಾಗಿ ದಂಡ ಅಥವಾ ಹೆಚ್ಚುವರಿ ಶುಲ್ಕಗಳನ್ನೂ ವಿಧಿಸುತ್ತವೆ.

►ಬ್ಯಾಂಕ್ ಬದಲಾವಣೆ

  ನೀವು ನಿಮ್ಮ ಹಾಲಿ ಬ್ಯಾಂಕ್‌ನ್ನು ಬದಲಾಯಿಸುವ ಅಥವಾ ಶಿಕ್ಷಣ ಸಾಲ ಬಾಕಿಯನ್ನು ಕಡಿಮೆ ಬಡ್ಡಿದರ ವಿಧಿಸುವ ಕೊಡುಗೆಯನ್ನು ಹೊಂದಿರುವ ಬೇರೊಂದು ಹಣಕಾಸು ಸಂಸ್ಥೆಗೆ ವರ್ಗಾಯಿಸುವ ಕ್ರಮವನ್ನು ಕೈಗೊಳ್ಳಬಹುದು. ಭದ್ರತೆಯಿಲ್ಲದ ಸಾಲದ ಪ್ರಕರಣದಲ್ಲಿ ಹಾಲಿ ಶಿಕ್ಷಣ ಸಾಲವನ್ನು ಭದ್ರತೆಯುಳ್ಳ ಸಾಲವನ್ನಾಗಿ ಪರಿವರ್ತಿಸುವುದನ್ನೂ ಪರಿಗಣಿಸಬಹುದು ಎನ್ನುತ್ತಾರೆ ತಜ್ಞರು. ಭದ್ರತೆಯುಳ್ಳ ಸಾಲಕ್ಕೆ ಮಾಸಿಕ ಕಂತುಗಳ ಮೊತ್ತ ಮತ್ತು ಬಡ್ಡಿ ಕಡಿಮೆಯಾಗುತ್ತವೆ. ಸಾಲಬಾಕಿ ವರ್ಗಾವಣೆಗೆ ಅವಕಾಶ ನೀಡುವ ಮುನ್ನ ಹೊಸ ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ನಿಮ್ಮ ಮರುಪಾವತಿ ಇತಿಹಾಸವನ್ನು ಪರಿಶೀಲಿಸುತ್ತದೆ. ಹೀಗಾಗಿ ಸಕಾಲದಲ್ಲಿ ಕಂತುಗಳನ್ನು ತುಂಬಬೇಕು ಮತ್ತು ಯಾವುದೇ ಕಂತುಗಳನ್ನು ತಪ್ಪಿಸಬಾರದು. ಶಿಕ್ಷಣ ಸಾಲ ಬಾಕಿಯನ್ನು ವರ್ಗಾಯಿಸುವಾಗ ಅಥವಾ ಬ್ಯಾಂಕನ್ನು ಬದಲಿಸುವಾಗ ಸಾಲಗಾರ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ವಿವಿಧ ಸೇವಾ ಶುಲ್ಕಗಳು, ಡಾಕ್ಯುಮೆಂಟೇಷನ್ ಶುಲ್ಕಗಳು ಮತ್ತು ವರ್ಗಾವಣೆಯಾದ ಸಾಲದ ಮೊತ್ತದ ಸುಮಾರು ಶೇ.2ರಷ್ಟು ಸಂಸ್ಕರಣ ಶುಲ್ಕ ಇತ್ಯಾದಿಗಳನ್ನು ವಿಧಿಸಲಾಗುತ್ತದೆ.

►ಮಾಸಿಕ ಕಂತುಗಳ ಮೊತ್ತದಲ್ಲಿ ಕ್ರಮೇಣ ಹೆಚ್ಚಳ

 ನೀವು ಶಿಕ್ಷಣ ಸಾಲವನ್ನು ಪಡೆದುಕೊಂಡಾಗ ಮರುಪಾವತಿ ಅವಧಿಯು ಹೆಚ್ಚಿನ ಮಾಸಿಕ ಕಂತಿನೊಂದಿಗೆ ಆರಂಭಗೊಳ್ಳುತ್ತದೆ ಮತ್ತು ಮರುಪಾವತಿ ಅವಧಿಯಲ್ಲಿ ಕಂತುಗಳ ಮೊತ್ತ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಸ್ಟೆಪ್-ಅಪ್ ರಿಪೇಮೆಂಟ್ ಪ್ಲಾನ್‌ನಲ್ಲಿ ಮರುಪಾವತಿಯ ಆರಂಭದ ಹಂತದಲ್ಲಿ ಕಂತಿನ ಮೊತ್ತ ಕಡಿಮೆಯಾಗಿರುತ್ತದೆ ಮತ್ತು ಕ್ರಮೇಣ ಹೆಚ್ಚುತ್ತ ಹೋಗುತ್ತದೆ. ಈ ಪದ್ಧತಿಯು ಸಾಲಗಾರನಿಗೆ ತನ್ನ ನಗದು ಹರಿವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ಒದಗಿಸುತ್ತದೆ. ಹೊಸದಾಗಿ ಉದ್ಯೋಗವನ್ನು ಪಡೆದವರು ಅಥವಾ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವವರು ಈ ಪದ್ಧತಿಯನ್ನು ಆಯ್ಕ ಮಾಡಿಕೊಳ್ಳುವುದು ಸೂಕ್ತ ಎನ್ನುವುದು ತಜ್ಞರ ಸಲಹೆಯಾಗಿದೆ. ಕಂತಿನ ಮೊತ್ತ ಕಡಿಮೆಯಾಗಿರುವುದರಿಂದ ಸಾಲಗಾರನಾಗಿ ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಲೂ ಈ ಪದ್ಧತಿಯು ನೆರವಾಗುತ್ತದೆ.

►ಹಣಪಾವತಿ ಮುಂದೂಡಿಕೆ

ಹಣಪಾವತಿಯ ಮುಂದೂಡಿಕೆಯಿಂದ ನೀವು ಕೆಲವು ತಿಂಗಳವರೆಗೆ ಕಂತುಗಳ ಪಾವತಿಗೆ ವಿರಾಮವನ್ನು ಪಡೆದುಕೊಳ್ಳಬಹುದು. ಇಎಂಐ ಹಾಲಿಡೇ ಎಂದೂ ಕರೆಯಲಾಗುವ ಈ ಸೌಲಭ್ಯದಡಿ ಸಾಲಗಾರರು ಹಣಪಾವತಿಯ ಮುಂದೂಡಿಕೆಗೆ ಅವಕಾಶ ನೀಡುವಂತೆ ಬ್ಯಾಂಕುಗಳನ್ನು ಕೋರಬಹುದಾಗಿದೆ. ಸದ್ಯೋಭವಿಷ್ಯದಲ್ಲಿ ಒಂದೇ ಬಾರಿಗೆ ಹಣವು ನಿಮಗೆ ಸಿಗಲಿದೆ ಎಂಬ ನಿರೀಕ್ಷೆ ನಿಮಗಿದ್ದರೆ ನೀವು ಈ ಪರ್ಯಾಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ ಈ ಸಂಕ್ಷಿಪ್ತ ವಿರಾಮದೊಂದಿಗೆ ನೀವು ನಿಮ್ಮ ಹಣಕಾಸು ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಹೆಚ್ಚಿನ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಹಣಪಾವತಿ ಮುಂದೂಡಿಕೆಗೆ ಶುಲ್ಕಗಳು ಮತ್ತು ದಂಡಗಳನ್ನು ವಿಧಿಸುತ್ತವೆ. ಹೀಗಾಗಿ ಈ ಕ್ರಮ ಕೈಗೊಳ್ಳುವ ಮುನ್ನ ನೀವು ತೆರಬೇಕಾದ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News