ಯೋಧರ ಹತ್ಯೆ ದೇಶದ ಅಭದ್ರತೆಗೆ ಕಾರಣ: ಬಿಎಸ್ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಪಿ.ಎ. ಮೊಹಿದ್ದೀನ್

Update: 2019-02-24 06:45 GMT

ಕಾಪು, ಫೆ. 24: ಸೈನ್ಯಕ್ಕೆ ಸೇರುವುದೆಂದರೆ ಮರಣಕ್ಕೆ ಆಹ್ವಾನ ನೀಡಿದಂತೆ ಎನ್ನುವ ಮಾತು ಭಾರತದಲ್ಲಿ ಚಿರಪರಿಚಿತವಾಗಿದೆ. ಓರ್ವ ಸೈನಿಕನ ಜೀವ ಹರಣವಾದರೆ, ದೇಶದ ಆಧಾರ ಸ್ತಂಭದ ಅಡಿಪಾಯ ಅಲುಗಾಡಿದಂತೆ ಎಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಅಸಿಸ್ಟೆಂಟ್ ಕಮಾಂಡೆಂಟ್ ಪಿ.ಎ. ಮೊಹಿದ್ದೀನ್ ಅವರು ಹೇಳಿದರು.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ತಾಲೂಕು ಘಟಕ ವತಿಯಿಂದ ಪುಲ್ವಾಮದಲ್ಲಿ ಯೋಧರ ಹತ್ಯೆಯ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆಯಿಂದ ಜೀವಿಸುತ್ತಿರುವ ಭಾರತ ದೇಶದ ಪ್ರಜೆಗಳು, ಸುಂದರ ವನದಲ್ಲಿ ಇರುವ ಹೂಗಳಂತೆ. ಇಲ್ಲಿ ಜೀವಿಸುತ್ತಿರುವ ಪ್ರಜೆಗಳ ಆಚಾರ, ವಿಚಾರ, ಉಡುಗೆ, ತೊಡುಗೆ, ಆಹಾರ ಪದ್ಧತಿಗಳಲ್ಲಿ ಭಿನ್ನತೆ ಇರಬಹುದು. ಆದರೆ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ ಇರುವ ಜನರಲ್ಲಿ ದೇಶಪ್ರೇಮಕ್ಕೆ ಕೊರತೆ ಇಲ್ಲ. ಕಾಶ್ಮೀರ ಕೂಡ ಭಾರತದ ಅವಿಭಾಜ್ಯ ಅಂಗವಾಗಿದ್ದು, ಕಾಶ್ಮೀರದಲ್ಲಿರುವ ಭಿನ್ನಮತವನ್ನು ಹೋಗಲಾಡಿಸಲು ಸರಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು. ಯೋಧರನ್ನು ಕಳೆದುಕೊಂಡ ಘಟನೆಯು ಖಂಡನೀಯವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒಕ್ಕೂಟದ ಜಿಲ್ಲಾ ಸಮಿತಿ ಸದಸ್ಯ ಮುಹಮ್ಮದ್ ಇದ್ರೀಸ್ ಹೇಳಿದರು.

ಈ ಸಂದರ್ಭ ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಕಟಪಾಡಿ, ತಾಲೂಕ್ ಉಪಾಧ್ಯಕ್ಷ ಉಮರ್ ಫಾರೂಕ್ ಪಡುಬಿದ್ರೆ, ಕಾರ್ಯದರ್ಶಿ ನಸೀರ್ ಅಹ್ಮದ್, ಜೊತೆ ಕಾರ್ಯದರ್ಶಿ ಮುಹಮ್ಮದ್ ರಫೀಕ್, ಕೋಶಾಧಿಕಾರಿ ಮುಹಮ್ಮದ್ ಇಕ್ಬಾಲ್ ಮಜೂರ್, ಮುಶ್ತಾಕ್ ಇಬ್ರಾಹೀಂ, ಆಜಬ್ಬ ಅಭಿಮಾನ್, ಬಶೀರ್ ಸಾಹೇಬ್, ಮುಹಮ್ಮದ್ ಸಾದಿಕ್ ದಿನಾರ್, ಮುಹಮ್ಮದ್ ಆರಿಫ್, ಅಬ್ದುಲ್ ಶುಕೂರು, ಶಾಬುದ್ದಿನ್ ಸಾಹೇಬ್, ನಝೀರ್ ಶೇಕ್, ಬಾಶು, ಬಾವು, ಭೂ ಸೇನೆಯ ಸೂರ್ಯ ನಾರಾಯಣ, ಅನಂತ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ತಾಲೂಕು ಅಧ್ಯಕ್ಷ ಶಬಿಃ ಅಹ್ಮದ್ ಖಾಝಿ ಸ್ವಾಗತಿಸಿ,. ಜಿಲ್ಲಾ ಸಮಿತಿ ಸದಸ್ಯ ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News