ಲೈಂಗಿಕ ಅಪರಾಧಿಗಳ ದತ್ತಾಂಶ ಕೋಶಕ್ಕೆ ಐದು ಲಕ್ಷಕ್ಕೂ ಅಧಿಕ ಹೆಸರು ಸೇರ್ಪಡೆ

Update: 2019-02-24 16:10 GMT

ಹೊಸದಿಲ್ಲಿ,ಫೆ.24: ಮಹಿಳೆಯರ ವಿರುದ್ಧ ಅಪರಾಧಗಳಿಗಾಗಿ ನ್ಯಾಯಾಲಯಗಳಿಂದ ದೋಷನಿರ್ಣಯ ಕ್ಕೊಳಗಾಗಿರುವ ಐದು ಲಕ್ಷಕ್ಕೂ ಅಧಿಕ ಲೈಂಗಿಕ ಅಪರಾಧಿಗಳ ಹೆಸರುಗಳನ್ನು ದತ್ತಾಂಶ ಕೋಶಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಗೃಹಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ರವಿವಾರ ತಿಳಿಸಿದರು.

ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ(ಎನ್‌ಸಿಆರ್‌ಬಿ)ವು ನಿರ್ವಹಿಸುತ್ತಿರುವ ದತ್ತಾಂಶ ಕೋಶವು ಇಂತಹ ಲೈಂಗಿಕ ಅಪರಾಧಿಗಳ ಮಾಹಿತಿಗಳನ್ನು ನಿರ್ವಹಿಸುತ್ತಿದ್ದು,ದೇಶಾದ್ಯಂತ ಲೈಂಗಿಕ ಅಪರಾಧಗಳನ್ನು ಭೇದಿಸಲು ಕಾನೂನು ಜಾರಿ ಸಂಸ್ಥೆಗಳು ಈ ದತ್ತಾಂಶ ಕೋಶದ ನೆರವು ಪಡೆದುಕೊಳ್ಳುತ್ತಿವೆ.

ದತ್ತಾಂಶ ಕೋಶವು ಅಪರಾಧಿಗಳ ಹೆಸರು,ವಿಳಾಸ,ಭಾವಚಿತ್ರ ಮತ್ತು ಬೆರಳಚ್ಚು ವಿವರಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಕಾನೂನು ಜಾರಿ ಸಂಸ್ಥೆಗಳು ಮಾತ್ರ ಪಡೆದುಕೊಳ್ಳಲು ಸಾಧ್ಯ,ಆದರೆ ಖಾಸಗಿತನದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಧಿಕಾರಿ ತಿಳಿಸಿದರು.

ಲೈಂಗಿಕ ಅಪರಾಧಿಗಳ ಪಟ್ಟಿಯನ್ನು ಕಾಯ್ದುಕೊಳ್ಳುವ ಅಮೆರಿಕ,ಬ್ರಿಟನ್,ಆಸ್ಟ್ರೇಲಿಯಾ,ಕೆನಡಾದಂತಹ ಕೆಲವೇ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ ಎಂದರು. ಅಮೆರಿಕವು ಇಂತಹ ದಾಖಲೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿಸಿರುವ ಏಕೈಕ ದೇಶವಾಗಿದೆ.

ಎನ್‌ಸಿಆರ್‌ಬಿ ಅಂಕಿಅಂಶಗಳಂತೆ ಮಹಿಳೆಯರ ವಿರುದ್ಧ 2015ರಲ್ಲಿ 3,29,243 ಮತ್ತು 2016ರಲ್ಲಿ 3,38,954 ಅಪರಾಧಗಳು ನಡೆದಿದ್ದು,2017 ಮತ್ತು 2018ರ ಅಪರಾಧ ವರದಿಗಳನ್ನು ಅದು ಇನ್ನಷ್ಟೇ ಬಿಡುಗಡೆಗೊಳಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News