ಆತಂಕಗೊಳ್ಳಬೇಡಿ, ಚುನಾವಣೆಗಾಗಿ ಸೇನಾಪಡೆಯನ್ನು ನಿಯೋಜಿಸಲಾಗುತ್ತಿದೆ: ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ

Update: 2019-02-24 16:14 GMT

ಶ್ರೀನಗರ,ಫೆ.24: ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಪೊಲೀಸ್ ಪಡೆಯ ನೂರು ಕಂಪೆನಿಗಳನ್ನು ನಿಯೋಜಿಸಿರುವುದು ಮತ್ತು ರಾಜ್ಯ ಸರಕಾರದ ಕೆಲವು ಘೋಷಣೆಗಳಿಂದ ಆತಂಕಗೊಂಡಿರುವ ಜನರಿಗೆ ರವಿವಾರ ಸಮಾಧಾನ ಹೇಳಿದ ರಾಜ್ಯಪಾಲ ಸತ್ಯಪಾಲ್ ಮಲಿಕ್, ಜನರು ಶಾಂತರಾಗುವಂತೆ ಮತ್ತು ಸುಳ್ಳು ಸುದ್ದಿಗಳನ್ನು ನಂಬದಂತೆ ಮನವಿ ಮಾಡಿದ್ದಾರೆ.

ಕಣಿವೆ ರಾಜ್ಯದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸುತ್ತಿರುವುದು ಚುನಾವಣೆಯ ಸಿದ್ಧತೆಯ ಭಾಗವಾಗಿದೆಯೇ ಹೊರತು ಇದರಿಂದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಕರ್ಫ್ಯೂ ಹೇರುವ ಅಥವಾ ಇತರ ಸುಳ್ಳುಸುದ್ದಿಗಳನ್ನು ನಂಬಬೇಡಿ. ಸೇನಾಪಡೆ ಭದ್ರತೆಗೆ ಸಂಬಂಧಿಸಿದಂತೆ ಕೆಲವೊಂದು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇದು ಪುಲ್ವಾಮಾ ದಾಳಿಗೆ ಸಂಬಂಧಿಸಿದ್ದಾಗಿದೆ ಎಂದು ಮಲಿಕ್ ಸ್ಪಷ್ಟಪಡಿಸಿದ್ದಾರೆ. ಪುಲ್ವಾಮಾ ದಾಳಿಯ ನಂತರ ಪರಿಣಾಮವನ್ನು ನಿಭಾಯಿಸಲು ಮತ್ತು ಈಗಲೂ ಕಣಿವೆಯಲ್ಲಿ ಮುಕ್ತವಾಗಿ ಅಲೆಯುತ್ತಿರುವ ಉಗ್ರರು ದೇಶದ ಶಾಂತಿಯನ್ನು ಕದಡಲು ನಡೆಸಬಹುದಾದ ದುಷ್ಕೃತ್ಯಗಳನ್ನು ತಡೆಯುವ ಹೊಣೆಯನ್ನು ಭದ್ರತಾ ಪಡೆಗೆ ನೀಡಲಾಗಿದೆ ಎಂದು ಮಲಿಕ್ ತಿಳಿಸಿದ್ದಾರೆ.

ರಾಜ್ಯ ಸರಕಾರ ಶನಿವಾರದಂದು ತೈಲವನ್ನು ಶೇಖರಿಸಿಡುವಂತೆ ಮತ್ತು ನ್ಯಾಯಬೆಲೆ ಅಂಗಡಿಗಳು ಸಂಜೆಯ ಒಳಗಾಗಿ ಆಹಾರಧಾನ್ಯಗಳನ್ನು ವಿತರಿಸಿ ಮುಗಿಸುವಂತೆ ಆದೇಶ ನೀಡಿದ ಮತ್ತು ವೈದ್ಯಕೀಯ ಸಿಬ್ಬಂದಿಯ ಚಳಿಗಾಲದ ರಜೆಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಆಡಳಿತಾತ್ಮಕ ಮಂಡಳಿಯ ಅನೌಪಚಾರಿಕ ಸಭೆ ಕರೆದ ರಾಜ್ಯಪಾಲರು ರಾಜ್ಯದ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಜನರಿಗೆ ಧೈರ್ಯದ ಮಾತುಗಳನ್ನು ಹೇಳುವ ಮೂಲಕ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News