ಸಿಆರ್‌ಪಿಎಫ್ ಸಿಬ್ಬಂದಿಯ ಅಪಾಯ, ಕಠಿಣತೆ ಭತ್ಯೆ ಹೆಚ್ಚಳ
Update: 2019-02-24 21:46 IST
ಹೊಸದಿಲ್ಲಿ,ಫೆ.24: ಸಿಆರ್‌ಪಿಎಫ್ ಸಿಬ್ಬಂದಿಯ ಅಪಾಯ ಮತ್ತು ಕಠಿಣತೆ ಭತ್ಯೆಯನ್ನು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಏರಿಕೆ ಮಾಡಿದ್ದು ನಿರೀಕ್ಷಕವರೆಗಿನ ರ್ಯಾಂಕ್‌ನ ಭತ್ಯೆಯನ್ನು ಮಾಸಿಕ 9,700ರೂ.ನಿಂದ 17,300ರೂ.ಗೆ ಹಾಗೂ ಅಧಿಕಾರಿಗಳ ಮಟ್ಟದ ಭತ್ಯೆಯನ್ನು ಮಾಸಿಕ 16,900ರೂ.ನಿಂದ 25,000ರೂ.ಗೆ ಏರಿಕೆ ಮಾಡಿದೆ ಎಂದು ಎಂಎಚ್‌ಎ ಪ್ರಕಟನೆಯಲ್ಲಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡ ಎಲ್ಲ ಅರೆಸೇನಾ ಪಡೆಯ ಸಿಬ್ಬಂದಿ ಕರ್ತವ್ಯಕ್ಕೆ ಅಥವಾ ರಜೆಯಲ್ಲಿ ತೆರಳಲು ವಾಣಿಜ್ಯ ವಿಮಾನಗಳನ್ನು ಬಳಸಬಹುದು ಎಂದು ಘೋಷಣೆ ಮಾಡಿದ ನಂತರ ಎಂಎಚ್‌ಎಯಿಂದ ಮತ್ತೊಂದು ಘೋಷಣೆ ಹೊರಬಿದ್ದಿದೆ.
ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದರು. ಮಡಿದವರಲ್ಲಿ ಬಹಳಷ್ಟು ಯೋಧರು ತಮ್ಮ ರಜೆಯನ್ನು ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು.