×
Ad

73 ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಇವಿಎಂ ಸಮಸ್ಯೆಗೆ ಪರಿಹಾರ ಸೂಚಿಸಿದ್ದು ಹೀಗೆ…

Update: 2019-02-24 21:52 IST

ಹೊಸದಿಲ್ಲಿ,ಫೆ.24: ಚುನಾವಣೆಗಳಲ್ಲಿ ಇಲೆಕ್ಟ್ರಾನಿಕ್ ಮತಯಂತ್ರವನ್ನು ಬಳಸುವ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಅಪಸ್ವರಗಳು ಎದ್ದಿರುವ ಮಧ್ಯೆಯೇ ಇದಕ್ಕೆ ಪರಿಹಾರ ಸೂಚಿಸಿ 73 ನಿವೃತ್ತ ನಾಗರಿಕ ಸೇವಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಲೋಕಸಭಾ ಚುನಾವಣೆ ಸಮೀಪವಿರುವಾಗಲೇ ಬರೆಯಲಾಗಿರುವ ಈ ಪತ್ರದಲ್ಲಿ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್, ವಿತ್ತ ಸಚಿವಾಲಯದ ಮಾಜಿ ಕಾರ್ಯದರ್ಶಿ ನರೇಂದ್ರ ಸಿಸೋಡಿಯ, ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್) ಮಾಜಿ ಅಧಿಕಾರಿ ಅರುಣಾ ರಾಯ್ ಮುಂತಾದವರ ಸಹಿಯಿದೆ. ಮಾಜಿ ನಾಗರಿಕ ಸೇವಕರ ಪ್ರಕಾರ, ಇವಿಎಂ ಫಲಿತಾಂಶಕ್ಕೆ ಸಮಾನಾಂತರವಾಗಿ ವಿವಿಪ್ಯಾಟ್‌ನ ಮತಗಳನ್ನು ಲೆಕ್ಕ ಹಾಕುವುದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಬಹಳ ಮುಖ್ಯವಾಗಿದೆ. ಯಾಕೆಂದರೆ ಇವಿಎಂಗಳು ಕಪ್ಪು ಪೆಟ್ಟಿಗೆಗಳಾಗಿದ್ದು ತಾನು ಹಾಕಿದ ಮತ ಸರಿಯಾಗಿ ದಾಖಲಾಗಿದೆಯೇ ಎಂದು ಮತದಾರ ತಿಳಿಯಲು ಸಾಧ್ಯವಿಲ್ಲ. ಹಾಗಾಗಿ ವಿವಿಪ್ಯಾಟ್‌ಗಳಲ್ಲಿ ಮತಗಳು ಚೀಟಿಗಳಲ್ಲಿ ದಾಖಲಾಗಿರುವುದರಿಂದ ಅದನ್ನು ಲೆಕ್ಕ ಹಾಕುವುದು ಉತ್ತಮ ಕ್ರಮವಾಗಿದೆ.

ಇವಿಎಂ ಬಳಸಿ ಚುನಾವಣೆ ನಡೆಸುವ ಸಂದರ್ಭದಲ್ಲಿ ಚುನಾವಣಾ ಆಯೋಗ ಹಲವು ತಪ್ಪು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಅವುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ನಿವೃತ್ತರ ತಂಡ ಸಲಹೆ ನೀಡಿದೆ. ಸದ್ಯ ತಲೆದೋರಿರುವುದು ಇವಿಎಂ ಸಮಸ್ಯೆಯಲ್ಲ ಬದಲಿಗೆ ಇವಿಎಂನಲ್ಲಿ ದಾಖಲಾದ ಮತಗಳನ್ನು ಲೆಕ್ಕ ಹಾಕುವ ಬಗ್ಗೆ. ಹಾಗಾಗಿ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ಇವಿಎಂ ಫಲಿತಾಂಶಕ್ಕೆ ಸಮಾನಾಂತರವಾಗಿ ಲೆಕ್ಕ ಹಾಕಿದರೆ ಇದಕ್ಕೆ ಪರಿಹಾರ ಸಿಗುತ್ತದೆ ಎಂದು ಮಾಜಿ ನಾಗರಿಕ ಸೇವಕರು ಅಭಿಪ್ರಾಯಿಸಿದ್ದಾರೆ.

ಶೇ.2ಕ್ಕಿಂತ ಕಡಿಮೆ ಅಥವಾ ಒಂದು ಸಾವಿರ ಮತಗಳ ಅಂತರವಿರುವ ಕ್ಷೇತ್ರಗಳಲ್ಲಿ ಅಧಿಕಾರಗಳು ವಿವಿಪ್ಯಾಟ್ ಚೀಟಿಗಳನ್ನು ಲೆಕ್ಕ ಹಾಕುವ ಸಂದರ್ಭವನ್ನು ನಿಭಾಯಿಸಲು ಚುನಾವಣಾ ಆಯೋಗ ಸೂಕ್ತ ರೂಪುರೇಷೆಯನ್ನು ರಚಿಸಬೇಕು ಎಂದು ಮಾಜಿ ಅಧಿಕಾರಿಗಳು ತಿಳಿಸಿದ್ದಾರೆ. ಮತಗಳನ್ನು ಲೆಕ್ಕ ಮಾಡುವ ಕಾರ್ಯದಿಂದ ಫಲಿತಾಂಶ ಪ್ರಕಟನೆಯಲ್ಲಿ ವಿಳಂಬವಾದರೂ ಈ ಪ್ರಕ್ರಿಯೆಯಿಂದ ಮತದಾರರು ಮತ್ತು ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಪ್ರಕ್ರಿಯೆ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸಬಹುದಾಗಿದೆ ಎಂದು ನಿವೃತ್ತ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News