ಆಟಿಕೆ ಪಿಸ್ತೂಲ್ ಹಿಡಿದು ವಿಮಾನ ಹೈಜಾಕ್ ಗೆ ಯತ್ನಿಸಿದ !
ಢಾಕಾ (ಬಾಂಗ್ಲಾದೇಶ), ಫೆ. 25: ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ದುಬೈಗೆ ಹಾರುತ್ತಿದ್ದ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಸಿದ ಹಾಗೂ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ಪ್ರಯತ್ನಿಸಿದ ಬಾಂಗ್ಲಾದೇಶಿ ಪ್ರಯಾಣಿಕನು ಆಟಿಕೆ ಪಿಸ್ತೂಲನ್ನು ಹೊಂದಿದ್ದನು ಹಾಗೂ ಅವನಲ್ಲಿ ಸ್ಫೋಟಕಗಳಿರಲಿಲ್ಲ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.
ಈ ವ್ಯಕ್ತಿಗೆ ರವಿವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಬಿಮನ್ ಬಾಂಗ್ಲಾದೇಶ್ ಏರ್‌ಲೈನ್ಸ್ ವಿಮಾನಕ್ಕೆ ಹತ್ತಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೋಯಿಂಗ್ 737-800 ವಿಮಾನವು ಚಿತ್ತಗಾಂಗ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ನಡೆಸಿತು. ತಕ್ಷಣ ವಿಮಾನದ ಒಳಗೆ ನುಗ್ಗಿದ ಕಮಾಂಡೊಗಳು ಶಂಕಿತ ಅಪಹರಣಕಾರ ಮೇಲೆ ಗುಂಡು ಹಾರಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಂಕಿತ ಅಪಹರಣಕಾರನು ಬಳಿಕ ಮೃತಪಟ್ಟಿದ್ದಾನೆ. ಎಲ್ಲ 148 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ.
‘‘ಶಂಕಿತನಲ್ಲಿದ್ದ ಪಿಸ್ತೂಲ್ ಆಟಿಕೆ ಪಿಸ್ತೂಲ್ ಆಗಿತ್ತು ಹಾಗೂ ಅವನ ದೇಹದಲ್ಲಿ ಬಾಂಬ್ ಇರಲಿಲ್ಲ’’ ಎಂದು ಚಿತ್ತಗಾಂಗ್ ಪೊಲೀಸ್‌ನ ಹೆಚ್ಚುವರಿ ಕಮಿಶನರ್ ಕುಸುಮ್ ದೇವನ್ ಹೇಳಿದರು.
ಪತ್ನಿಯೊಂದಿಗೆ ವಿರಸ ಹೊಂದಿದ್ದ
‘‘ಶಂಕಿತ ವಿಮಾನ ಅಪಹರಣಕಾರನು ಮಾನಸಿಕ ಅಸ್ಥಿರತೆ ಹೊಂದಿದ್ದಂತೆ ಕಂಡುಬಂದನು. ಅವನು ತನ್ನ ಹೆಂಡತಿಯೊಂದಿಗೆ ಮನಸ್ತಾಪ ಹೊಂದಿದ್ದನು ಹಾಗೂ ಅದಕ್ಕಾಗಿ ಪ್ರಧಾನಿಯೊಂದಿಗೆ ಮಾತನಾಡಲು ಬಯಸಿದ್ದನು ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ನಾವು ಈಗಲೂ ತನಿಖೆ ಮಾಡುತ್ತಿದ್ದೇವೆ. ಈಗಲೇ ನಾವು ಯಾವುದೇ ರೀತಿಯ ನಿರ್ಧಾರಕ್ಕೆ ಬರುವುದಿಲ್ಲ’’ ಎಂದು ಚಿತ್ತಗಾಂಗ್ ಹೆಚ್ಚುವರಿ ಪೊಲೀಸ್ ಕಮಿಶನರ್ ಹೇಳಿದರು.