×
Ad

ಫೇಸ್‌ಬುಕ್‌ನಲ್ಲಿ ಪಾಕಿಸ್ತಾನದ ಬೇಹುಗಾರನ ಬಗ್ಗೆ ಎಚ್ಚರಿಕೆಯಿಂದಿರಲು ಭದ್ರತಾ ಸಿಬ್ಬಂದಿಗೆ ಸೂಚನೆ

Update: 2019-02-25 22:08 IST

ಹೊಸದಿಲ್ಲಿ,ಫೆ.25: ಫೇಸ್‌ಬುಕ್ ಮೂಲಕ ಭಾರತೀಯ ಭದ್ರತಾ ಪಡೆಗಳ ಸಿಬ್ಬಂದಿಯನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸುತ್ತಿರುವ ವಿದ್ಯಾಮಾನ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇಂಥ ಫೇಸ್‌ಬುಕ್ ಖಾತೆಗಳ ಬಗ್ಗೆ ಎಚ್ಚರಿಕೆಯಿಂದಿರಲು ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ.

ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು ಫೇಸ್‌ಬುಕ್‌ನಲ್ಲಿ ಭಾರತೀಯ ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಭಾರತೀಯ ಭದ್ರತಾ ಪಡೆಗಳ ಸಿಬ್ಬಂದಿಯನ್ನು ಹನಿಟ್ರಾಪ್ ಮಾಡಲು ಪ್ರಯತ್ನಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೇಸ್‌ ಬುಕ್ ‌ನಲ್ಲಿ ಭಾರತೀಯ ಮಹಿಳೆಯ ಹೆಸರಿನಲ್ಲಿ ಖಾತೆಯನ್ನು ತೆರೆದು ಸೇನಾ ಸಿಬ್ಬಂದಿಗೆ ಸಂದೇಶಗಳನ್ನು ಕಳುಹಿಸುತ್ತಿರುವ ಬಗ್ಗೆ ಭದ್ರತಾ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ ನಂತರ ಪರಿಶೀಲನೆ ನಡೆಸಿದಾಗ ಅದು ಪಾಕಿಸ್ತಾನಿ ಗುಪ್ತಚರನ ಖಾತೆಯಾಗಿದ್ದು ಪಾಕಿಸ್ತಾನದಲ್ಲೇ ತೆರೆಯಲಾಗಿತ್ತು ಎಂಬುದು ಬೆಳಕಿಗೆ ಬಂದಿತ್ತು ಎಂದು ಭದ್ರತಾ ಗುಪ್ತಚರ ಮೂಲಗಳು ತಿಳಿಸಿವೆ.

ನಕಲಿ ಫೇಸ್‌ಬುಕ್ ಖಾತೆಯನ್ನು ಬಳಸಿ ಭಾರತೀಯ ಭದ್ರತಾ ಸಿಬ್ಬಂದಿಯನ್ನು ಹನಿಟ್ರ್ಯಾಪ್ ಮಾಡಿ ಸೂಕ್ಷ್ಮ ರಹಸ್ಯ ಮಾಹಿತಿಗಳನ್ನು ಪಡೆದುಕೊಳ್ಳುವಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಯಶಸ್ವಿಯಾಗಿರುವ ಹಲವು ಘಟನೆಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಅನಿಕಾ ಚೋಪ್ರಾ ಎಂಬ ನಕಲಿ ಫೇಸ್‌ಬುಕ್ ಖಾತೆಯನ್ನು ಬಳಸುತ್ತಿದ್ದ ಐಎಸ್‌ಐ ಬೇಹುಗಾರನ ಜಾಲಕ್ಕೆ ಸಿಲುಕಿದ್ದ ಸೇನಾ ಜವಾನನನ್ನು ಅಧಿಕಾರಿಗಳು ಬಂಧಿಸಿದ್ದರು.

ಈ ಇಬ್ಬರು ಫೇಸ್‌ಬುಕ್‌ನಲ್ಲಿ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದರು ಮತ್ತು ಆರೋಪಿ ಯೋಧ ತನ್ನ ಸಶಸ್ತ್ರ ವಿಭಾಗ ಮತ್ತು ಅದರ ಚಲನವಲನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದರು. ಭಾರತೀಯ ವಾಯುಪಡೆಯ ಕ್ಯಾಪ್ಟನ್, ಬ್ರಹ್ಮೋಸ್‌ನ ಉದ್ಯೋಗಿಯನ್ನು ಕೂಡಾ ಇದೇ ಕಾರಣಕ್ಕಾಗಿ ಅಧಿಕಾರಿಗಳು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News