ವಾಯುಸೇನೆ ದಾಳಿ ಸ್ವಾಗತಾರ್ಹ: ವೀರಪ್ಪ ಮೊಯ್ಲಿ

Update: 2019-02-26 08:12 GMT

ಮಂಗಳೂರು, ಫೆ.26: ವಾಯು ಸೇನೆ ನಿನ್ನೆ ರಾತ್ರಿ ಉಗ್ರಗ್ರಾಮಿಗಳ ತಾಣವನ್ನು ಛೇದಿಸಿರುವುದು ಸ್ವಾಗತಾರ್ಹ. ಆದರೆ ಯಾವುದೇ ರೀತಿಯ ಪ್ರತಿದಾಳಿಯನ್ನು ಎದುರಿಸಲು ನಾವು ಸದಾ ಸನ್ನದ್ಧರಾಗಿರಬೇಕು ಎಂದು ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. ನಾವು ಯಾವತ್ತೂ ಯಾವುದೇ ರೀತಿಯಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇವೆ. ಆದರೆ ಪಾಕಿಸ್ತಾನಕ್ಕೆ ಆ ಭಾವನೆ ಇಲ್ಲ. ಹತಾಶ ಹಾಗೂ ಉಗ್ರಗಾಮಿಗಳ ತಾಣವನ್ನು ಹೊಂದಿರುವ ದೇಶ. ಅಂತಹ ದೇಶದ ಮೇಲೆ ದಾಳಿ ಮಾಡುವಾಗ ಸರ್ವ ರೀತಿಯ ಸಿದ್ಧತೆ ಮಾಡಿರುವ ವಿಶ್ವಾಸ ನಮಗಿದೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ. ವೈರಿಗಳನ್ನು ಸದೆಬಡಿಯುವ ಕೆಲಸ ಸರಕಾರದ್ದು ಎಂದು ವೀರಪ್ಪ ಮೊಯ್ಲಿ ಹೇಳಿದರು.

ಪುಲ್ವಾಮದಲ್ಲಿ ವೈರಿಗಳಿಂದ ನಮ್ಮ ನೆಲದಲ್ಲಿ ನಡೆದ ದಾಳಿ ದುರದೃಷ್ಟಕರ. ನಾವು ವೈರಿಗಳ ವಿಚಾರದಲ್ಲಿ ಯಾವತ್ತೂ ಎಚ್ಚರದಿಂದ ಇರಬೇಕು. ನೆರೆಹೊರೆಯಲ್ಲಿ, ಅದರಲ್ಲೂ ಗಡಿ ಪ್ರದೇಶಗಳಲ್ಲಿ ನಮ್ಮ ಶತ್ರುಗಳು ಇರುವಾಗ ಜಾಗೃತಾ ಮನೋಭೂಮಿಕೆಯನ್ನು ಸದಾ ಹೊಂದಿರಬೇಕು. ವೈರಿಗಳನ್ನು ಎದುರಿಸುವ ಶಕ್ತಿ ನಮ್ಮ ದೇಶದ ಜನರಲ್ಲಿದೆ. ಆಕಾಂಕ್ಷೆಯೂ ಇದೆ. ಪುಲ್ವಾಮದಲ್ಲಿ ನಡೆದ ಘಟನೆಯು ಗುಪ್ತಚರ ಮಾಹಿತಿ ನೀಡುವಲ್ಲಿ ವೈಫಲ್ಯವಾದ ಕಾರಣ ಸಂಭವಿಸಿದ್ದು. ಹಾಗಾಗಿ ಸದಾ ಎಚ್ಚರವಾಗಿರಬೇಕು ಎಂದು ಅವರು ಹೇಳಿದರು.

 ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ ಚಿಕ್ಕಬಳ್ಳಾಪುರದಲ್ಲಿ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಕೂಡಾ ಕಣ್ಣಿಟ್ಟಿದೆ. ಅದು ಗೆಲ್ಲುವ ಸೀಟು. ಅಲ್ಲಿ ಗೆಲುವಿಗಾಗಿ ಕಳೆದ 10 ವರ್ಷಗಳಲ್ಲಿ ನಾವಲ್ಲಿ ಅಂತಹ ಮನೋಭೂಮಿಕೆಯನ್ನು ಕಟ್ಟಿದ್ದೇವೆ. ಹಾಗಾಗಿ ಸ್ವಾಭಾವಿಕವಾಗಿ ಅಲ್ಲಿ ಕಣ್ಣಿರುವುದು ಸಹಜ. ಆದರೆ ಆ ಕ್ಷೇತ್ರದಲ್ಲಿ ಬೇರೆ ಯಾರೂ ಸ್ಪರ್ಧಿಸಲು ಕೇಳಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹಾಗಿದ್ದರೂ ಹೊಂದಾಣಿಕೆ ಸುಮಧುರ ಹಾಗೂ ಸಮನ್ವಯತೆಯಿಂದ ನಡೆಯಲಿದೆ. ಮೈತ್ರಿ ಸರಕಾರ ಇರುವುದರಿಂದ ಮುಂದಿನ ಚುನಾವಣೆಯಲ್ಲಿ ನಾವು ಸಮನ್ವಯತೆಯಿಂದ ಮುಂದುವರಿಯಲಿದ್ದೇವೆ. ನಾನು ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧಿಸುತ್ತೇನೆ. ಎರಡು ಬಾರಿ ಗೆದ್ದಿದ್ದೇನೆ. ಮೂರನೆ ಬಾರಿಯೂ ಗೆಲ್ಲುತ್ತೇನೆ ಎಂದು ಮೊಯ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News