×
Ad

ಎಲ್ಲ ಸಾಧ್ಯತೆಗಳಿಗೆ ಸಿದ್ಧರಾಗಿ: ಪಾಕ್ ಸಶಸ್ತ್ರ ಪಡೆಗಳು, ಜನರಿಗೆ ಇಮ್ರಾನ್ ಖಾನ್ ಸೂಚನೆ

Update: 2019-02-26 21:06 IST

ಇಸ್ಲಾಮಾಬಾದ್, ಫೆ. 26: ಎಲ್ಲ ಸಾಧ್ಯತೆಗಳಿಗೆ ಸಿದ್ಧರಾಗಿರುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ದೇಶದ ಸಶಸ್ತ್ರ ಪಡೆಗಳು ಮತ್ತು ಜನರಿಗೆ ಸೂಚಿಸಿದ್ದಾರೆ.

ಪಾಕಿಸ್ತಾನದ ಖೈಬರ್ ಪಖ್ತೂಂಖ್ವ ರಾಜ್ಯದ ಬಾಲಕೋಟ್ ಸಮೀಪದಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ಮಂಗಳವಾರ ಮುಂಜಾನೆ ದಾಳಿ ನಡೆಸಿದ ಬಳಿಕ ಈ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯ ಅಧ್ಯಕ್ಷತೆ ವಹಿಸಿದ ವೇಳೆ ಅವರು ಈ ಸೂಚನೆ ನೀಡಿದ್ದಾರೆ. ದೇಶದ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಹಾಗೂ ಇತರ ಉನ್ನತ ಸರಕಾರಿ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

‘‘ಭಾರತವು ಅನವಶ್ಯಕ ಆಕ್ರಮಣವನ್ನು ನಡೆಸಿದೆ. ಇದಕ್ಕೆ ಪಾಕಿಸ್ತಾನವು ತಾನು ನಿರ್ಧರಿಸಿದ ಸಮಯ ಮತ್ತು ಸ್ಥಳದಲ್ಲಿ ಪ್ರತಿಕ್ರಿಯೆ ನೀಡಲಿದೆ’’ ಎಂದು ಸಭೆಯ ಬಳಿಕ ಪಾಕಿಸ್ತಾನದ ಪ್ರಧಾನಿ ಕಚೇರಿ ಹೊರಡಿಸಿದ ಹೇಳಿಕೆಯೊಂದು ತಿಳಿಸಿದೆ.

‘‘ಸಶಸ್ತ್ರ ಪಡೆಗಳು ಮತ್ತು ಪಾಕಿಸ್ತಾನದ ಜನತೆ ಎಲ್ಲ ಸಾಧ್ಯತೆಗಳನ್ನು ಎದುರಿಸಲು ಸಜ್ಜಾಗಿರಬೇಕು ಎಂಬುದಾಗಿ ಪ್ರಧಾನಿ ಸೂಚನೆ ನೀಡಿದ್ದಾರೆ’’ ಎಂದು ಅದು ಹೇಳಿದೆ.

ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಸುಮಾರು 300 ಭಯೋತ್ಪಾದಕರು ಸತ್ತಿದ್ದಾರೆ ಎಂಬುದಾಗಿ ಸರಕಾರಿ ಮೂಲಗಳು ಹೇಳುತ್ತಿವೆ.

►ಭಾರತ ವಿವೇಚನೆಯಿಂದ ವರ್ತಿಸಲಿ: ಪಾಕ್ ವಿದೇಶ ಸಚಿವ

ಭಾರತ ವಿವೇಚನೆಯಿಂದ ವರ್ತಿಸಬೇಕು ಹಾಗೂ ಭಾರತದ ‘ಅತಿಕ್ರಮಣ’ಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುವ ಹಕ್ಕು ಪಾಕಿಸ್ತಾನಕ್ಕೆ ಇದೆ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಹೇಳಿದ್ದಾರೆ.

‘‘ಇದು ಗಂಭೀರ ಅತಿಕ್ರಮಣ ಎಂಬುದಾಗಿ ನಾನು ಪರಿಗಣಿಸುತ್ತೇನೆ. ಇದು ಗಡಿ ನಿಯಂತ್ರಣ ರೇಖೆಯ ಉಲ್ಲಂಘನೆ. ಆತ್ಮರಕ್ಷಣೆಯ ಹಾಗೂ ಸೂಕ್ತ ಉತ್ತರ ನೀಡುವ ಹಕ್ಕು ಪಾಕಿಸ್ತಾನಕ್ಕೆ ಇದೆ’’ ಎಂದು ಕುರೇಶಿ ಹೇಳಿದ್ದಾರೆ ಎಂದು ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಬಿಡುಗಡೆ ಮಾಡಿದ ವೀಡಿಯೊ ಹೇಳಿಕೆಯೊಂದು ತಿಳಿಸಿದೆ.

►ಭಾರತದ ಆಕ್ರಮಣ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ: ಪಾಕ್

ಭಾರತ ನಡೆಸಿರುವ ಗಡಿ ನಿಯಂತ್ರಣ ರೇಖೆಯ ಉಲ್ಲಂಘನೆಯನ್ನು ಪಾಕಿಸ್ತಾನವು ವಿಶ್ವಸಂಸ್ಥೆ ಮತ್ತು ಇತರ ಅಂತರ್‌ರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರಸ್ತಾಪಿಸುವುದು ಎಂದು ಪಾಕಿಸ್ತಾನದ ಸುದ್ದಿ ವಾಹಿನಿ ‘ಜಿಯೋ ಟಿವಿ’ ವರದಿ ಮಾಡಿದೆ.

ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಅದು ಹೇಳಿದೆ.

‘‘ಭಾರತ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿರುವುದನ್ನು ವಿಶ್ವಸಂಸ್ಥೆ, ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಮತ್ತು ಇತರ ಮಿತ್ರ ದೇಶಗಳೊಂದಿಗೆ ಪ್ರಸ್ತಾಪಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News