ಸಂಯಮ ಕಾಯ್ದುಕೊಳ್ಳಲು ಭಾರತ, ಪಾಕ್‌ಗೆ ಚೀನಾ ಒತ್ತಾಯ

Update: 2019-02-26 17:34 GMT

ಬೀಜಿಂಗ್, ಫೆ. 26: ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತರಬೇತಿ ಶಿಬಿರವನ್ನು ಭಾರತೀಯ ವಾಯುಪಡೆ ವಿಮಾನಗಳು ಧ್ವಂಸಗೊಳಿಸಿದ ಬಳಿಕ, ಸಂಯಮವನ್ನು ಕಾಯ್ದುಕೊಳ್ಳುವಂತೆ ಭಾರತ ಮತ್ತು ಪಾಕಿಸ್ತಾನಗಳನ್ನು ಚೀನಾ ಮಂಗಳವಾರ ಒತ್ತಾಯಿಸಿದೆ.

‘‘ಭಾರತ ಮತ್ತು ಪಾಕಿಸ್ತಾನಗಳೆರಡೂ ಸಂಯಮ ವಹಿಸುತ್ತವೆ ಹಾಗೂ ಈ ವಲಯದಲ್ಲಿನ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುವ ಮತ್ತು ಪರಸ್ಪರ ಸಂಬಂಧವನ್ನು ವೃದ್ಧಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ನಾವು ಭಾವಿಸುತ್ತೇವೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಭಾರತ ಮಂಗಳವಾರ ಮುಂಜಾನೆ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ತರಬೇತಿ ಸ್ಥಳಗಳನ್ನು ಗುರಿಯಾಗಿಸಿ, ಗಡಿ ನಿಯಂತ್ರಣ ರೇಖೆಯ ಇನ್ನೊಂದು ಭಾಗದಲ್ಲಿ ‘‘ಸೇನಾ ದಾಳಿಯಲ್ಲದ, ಮುನ್ನೆಚ್ಚರಿಕೆ ವಾಯು ದಾಳಿ’’ಗಳನ್ನು ನಡೆಸಿತು ಎಂಬುದಾಗಿ ಹೊಸದಿಲ್ಲಿಯಲ್ಲಿ ಭಾರತೀಯ ಅಧಿಕಾರಿಗಳು ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 40 ಸಿಆರ್‌ಪಿಎಫ್ ಸೈನಿಕರು ಮೃತಪಟ್ಟ ಘಟನೆಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಈ ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News