ನಮ್ಮ ಭೂಪ್ರದೇಶದ ಮೇಲೆ ಪಾಕ್ ಸೇನೆಯಿಂದ ಅತಿಕ್ರಮಣ: ವಿಶ್ವಸಂಸ್ಥೆಗೆ ಅಫ್ಘಾನಿಸ್ತಾನ ದೂರು

Update: 2019-02-26 17:44 GMT

ಕಾಬೂಲ್, ಫೆ. 26: ಪಾಕಿಸ್ತಾನದ ಸೇನೆಯು ತನ್ನ ಭೂಪ್ರದೇಶದಲ್ಲಿ ಅತಿಕ್ರಮಣ ನಡೆಸಿದೆ ಎಂದು ಅಫ್ಘಾನಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿದೆ. ಪಾಕ್ ಸೇನೆಯು ಅಫ್ಘಾನ್ ಭೂಭಾಗಗಳ ಮೇಲೆ ಶೆಲ್ ದಾಳಿ ನಡೆಸುತ್ತಿದೆ, ಅದರ ಸೇನಾ ವಿಮಾನಗಳು ಅಫ್ಘಾನ್ ವಾಯುಪ್ರದೇಶವನ್ನು ಉಲ್ಲಂಘಿಸುತ್ತಿವೆ ಹಾಗೂ ಅಫ್ಘಾನ್ ನೆಲದಲ್ಲಿ ಸೇನಾ ಠಾಣೆಗಳು ಮತ್ತು ಬೇಲಿಗಳನ್ನು ನಿರ್ಮಿಸುತ್ತಿದೆ ಎಂದು ಅಫ್ಘಾನಿಸ್ತಾನ ಆರೋಪಿಸಿದೆ.

ವಿಶ್ವಸಂಸ್ಥೆಯಲ್ಲಿ ಅಫ್ಘಾನ್ ನಿಯೋಗದ ಉಪಮುಖ್ಯಸ್ಥ ನಝೀಫುಲ್ಲಾ ಸಲರ್‌ಝಾಯ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಫೆಬ್ರವರಿ 22ರಂದು ಬರೆದ ಪತ್ರದಲ್ಲಿ ಈ ಆರೋಪಗಳನ್ನು ಮಾಡಿದ್ದಾರೆ.

ಪಾಕಿಸ್ತಾನದ ಸೇನೆಯು ಅಫ್ಘಾನ್ ಭೂಪ್ರದೇಶದಲ್ಲಿ 2012ರಿಂದಲೇ ಅತಿಕ್ರಮಣ ನಡೆಸುತ್ತಿದೆ ಎಂದು ಹೇಳಿರುವ ಪತ್ರವು, ಆದಾಗ್ಯೂ, ‘‘ಈ ಕಾನೂನುಬಾಹಿರ ಮತ್ತು ಅಸಮರ್ಥನೀಯ ಕೃತ್ಯಗಳ ವ್ಯಾಪ್ತಿ ಮತ್ತು ಸಂಖ್ಯೆ 2017ರಿಂದ ನಾಟಕೀಯವಾಗಿ ಹೆಚ್ಚಿದೆ’’ ಎಂದಿದೆ.

ಕುನಾರ್ ಮತ್ತು ನಂಗರ್‌ಹಾರ್ ಪ್ರಾಂತಗಳ ಮೇಲೆ ನಡೆದ ಶೆಲ್ ದಾಳಿ ಸೇರಿದಂತೆ, ಪಾಕಿಸ್ತಾನದ ಈ ಅತಿಕ್ರಮಣಗಳಿಂದಾಗಿ ಹಲವಾರು ಅಮಾಯಕ ಅಫ್ಘಾನ್ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಅಂಗವಿಕಲರಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಅದೂ ಅಲ್ಲದೆ, ಸರಕಾರಿ ಮತ್ತು ಖಾಸಗಿ ಕಟ್ಟಡಗಳು ಧ್ವಂಸಗೊಂಡಿವೆ ಹಾಗೂ ಅದು ವಿಶ್ವಸಂಸ್ಥೆಯ ಸನ್ನದು ಮತ್ತು ಅಂತರ್‌ರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News