"ಪಾಕ್ ಸೇನೆ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ"
ಹೊಸದಿಲ್ಲಿ,ಫೆ.27: ಬುಧವಾರ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ತನ್ನ ವಶದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದ ಪಾಕಿಸ್ತಾನವು ಕೆಲವೇ ಗಂಟೆಗಳಲ್ಲಿ ತನ್ನ ರಾಗ ಬದಲಿಸಿದೆ. ಓರ್ವ ಭಾರತೀಯ ಪೈಲಟ್ ಮಾತ್ರ ತಮ್ಮ ವಶದಲ್ಲಿದ್ದಾನೆ ಎಂದು ಪಾಕಿಸ್ತಾನಿ ರಕ್ಷಣಾ ವಕ್ತಾರರು ತಿಳಿಸಿದರು. ಇದೇ ವೇಳೆ ಪಾಕಿಸ್ತಾನದ ಅಧಿಕೃತ ಮಾಧ್ಯಮಗಳು ಬಿಡುಗಡೆಗೊಳಿಸಿರುವ ಹೊಸ ವೀಡಿಯೊ ‘ಪಾಕ್ ಸೇನೆಯು ತನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದೆ’ ಎಂದು ಪೈಲಟ್ ಅಭಿನಂದನ್ ಹೇಳುತ್ತಿರುವುದನ್ನು ತೋರಿಸಿದೆ.
ಪಾಕಿಸ್ತಾನಿ ಸೇನೆಯು ತನ್ನನ್ನು ನಡೆಸಿಕೊಂಡಿರುವ ರೀತಿಯಿಂದ ತಾನು ‘ತುಂಬ ಪ್ರಭಾವಿತನಾಗಿದ್ದೇನೆ’ ಎಂದು ಪೈಲಟ್ ಹೇಳಿರುವುದು ಹೊಸ ವೀಡಿಯೊದಲ್ಲಿ ಕೇಳಿಬರುತ್ತಿದೆ. ಪ್ರಶ್ನಿಸಿದಾಗ ತನ್ನ ಹುಟ್ಟೂರಿನ ವಿವರಗಳನ್ನು ಬಹಿರಂಗಗೊಳಿಸಲು ಅವರು ನಿರಾಕರಿಸಿದ್ದು ವೀಡಿಯೊದಲ್ಲಿ ಕಂಡುಬಂದಿದೆ.
ತನ್ಮಧ್ಯೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಂತರರಾಷ್ಟ್ರೀಯ ಮಾನವೀಯತೆ ಕಾನೂನು ಮತ್ತು ಜಿನೀವಾ ನಿರ್ಣಯಗಳ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಭಾರತೀಯ ವಾಯುಪಡೆಯ ಗಾಯಾಳು ಸಿಬ್ಬಂದಿಯನ್ನು ಪಾಕಿಸ್ತಾನವು ಕೀಳು ರೀತಿಯಲ್ಲಿ ಪ್ರದರ್ಶಿಸಿದ್ದನ್ನು ಆಕ್ಷೇಪಿಸಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ.
ತನ್ನ ವಶದಲ್ಲಿರುವ ಭಾರತೀಯ ರಕ್ಷಣಾ ಪಡೆಯ ಸಿಬ್ಬಂದಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸೂಚಿಸಲಾಗುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ. ಅವರ ತಕ್ಷಣದ ಮತ್ತು ಸುರಕ್ಷಿತ ಬಿಡುಗಡೆಯನ್ನೂ ಭಾರತವು ನಿರೀಕ್ಷಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಿಲಿಟರಿ ನೀತಿಗಳ ನಿಯಮಗಳಂತೆ ಭಾರತೀಯ ಪೈಲಟ್‌ನನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.