ಭಾರತೀಯ ವಾಯುದಾಳಿಯನ್ನು ಮತಯಾಚನೆಗೆ ಬಳಸಿದ ಅಮಿತ್ ಶಾ
ಹೊಸದಿಲ್ಲಿ,ಫೆ.27: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಮಧ್ಯೆಯೇ ಕಳೆದ ಎರಡು ದಿನಗಳಲ್ಲಿ ಭಾರತೀಯ ವಾಯುಪಡೆ ಪಾಕಿಸ್ತಾನದ ಮೇಲೆ ಮಾಡಿರುವ ದಾಳಿಗಳನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉತ್ತರ ಪ್ರದೇಶದ ಗಾಝಿಪುರದಲ್ಲಿ ಮತಯಾಚನೆಗೆ ಬಳಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪೂರ್ವ ಉತ್ತರ ಪ್ರದೇಶದ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಶಾ, ದೇಶದ ಭದ್ರತೆಯ ಭರವಸೆಯನ್ನು ಯಾರು ನೀಡುತ್ತಾರೆ? ಘಟಬಂಧನದ ಜನರು ಅಥವಾ ಮೋದಿಜಿ?ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನಕ್ಕೆ ಯಾರು ತಕ್ಕ ಉತ್ತರ ನೀಡಬಲ್ಲರು? ಭಯೋತ್ಪಾದನೆಯನ್ನು ಯಾರು ನಿರ್ಮೂಲ ಮಾಡಬಲ್ಲರು? ಎಂದೂ ಶಾ ಜನರನ್ನು ಪ್ರಶ್ನಿಸಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಬಿಜೆಪಿಯ ಕಮಲ ಜ್ಯೋತಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಶಾ ಈ ಪ್ರಶ್ನೆಗಳನ್ನು ಜನರಿಗೆ ಕೇಳಿದ್ದಾರೆ. ಪುಲ್ವಾಮ ಆತ್ಮಹತ್ಯಾ ದಾಳಿಯನ್ನು ರಾಜಕೀಯ ಲಾಭಕ್ಕೆ ಬಳಸದಂತೆ ವಿಪಕ್ಷಗಳಲ್ಲಿ ಹಲವು ಬಾರಿ ಮನವಿ ಮಾಡಿರುವ ಬಿಜೆಪಿ ಸದ್ಯ ವಾಯುದಾಳಿಯನ್ನು ತನ್ನ ಚುನಾವಣಾ ಪ್ರಚಾರದಲ್ಲಿ ಅಳವಡಿಸಿಕೊಂಡಿರುವುದು ವ್ಯಾಪಕ ಟೀಕೆಗೆ ತುತ್ತಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.