ಮಾರ್ಚ್‌ನಲ್ಲಿ ರಕ್ಷಣಾ ಉಪಗ್ರಹ ಉಡಾಯಿಸಲಿರುವ ಇಸ್ರೊ
ಚೆನ್ನೈ,ಫೆ.27: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಾಗಿ ಇಲೆಕ್ಟ್ರಾನಿಕ್ ಇಂಟಲಿಜೆನ್ಸ್ ಉಪಗ್ರಹ ಎಮಿಸ್ಯಾಟನ್ನು ವಿಶೇಷ ಕಾರ್ಯಕ್ರಮವೊಂದರಲ್ಲಿ ಮಾರ್ಚ್‌ನಲ್ಲಿ ಕಕ್ಷೆಗೆ ಉಡಾಯಿಸಲಾಗುವುದು ಎಂದು ಇಸ್ರೊ ತಿಳಿಸಿದೆ. ಎಮಿಸ್ಯಾಟ್‌ನೊಂದಿಗೆ ಇತರ ದೇಶಗಳ 28 ಉಪಗ್ರಹಗಳನ್ನು ಹಾರಿಸಲು ಉದ್ದೇಶಿಸಲಾಗಿದ್ದು ಅದರೊಂದಿಗೆ ಪಿಎಸ್‌ಎಲ್‌ವಿಯ ನೂತನ ಮಾದರಿಯಲ್ಲಿ ಮೂರು ವಿಭಿನ್ನ ಪರಿಭ್ರಮಣೆಯಯಂಥ ನೂತನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಯನ್ನು ನೀಡಲು ಇಸ್ರೊ ಬಯಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಸ್‌ಎಲ್‌ವಿಯು ಪ್ರಮುಖವಾಗಿ ರಕ್ಷಣಾ ಉಪಗ್ರಹ ಎಮಿಸ್ಯಾಟನ್ನು ಕಕ್ಷೆಗೆ ಕೊಂಡೊಯ್ಯಲಿದೆ. ಈ ಉಪಗ್ರಹ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಸೇರಿದೆ ಎಂದು ಇಸ್ರೊ ಮುಖ್ಯಸ್ಥ ಕೆ. ಶಿವನ್ ತಿಳಿಸಿದ್ದಾರೆ. ಎಮಿಸ್ಯಾಟ್ 420ಕೆ.ಜಿ ತೂಕ ಹೊಂದಿದ್ದು ನಮ್ಮ ಗ್ರಾಹಕರ 28 ಉಪಗ್ರಹಗಳ ಒಟ್ಟು ತೂಕ 250 ಕೆ.ಜಿ ಆಗಿದೆ ಎಂದು ಶಿವನ್ ತಿಳಿಸಿದ್ದಾರೆ.
ಜುಲೈ/ಆಗಸ್ಟ್‌ನಲ್ಲಿ ಇನ್ನೂ ಎರಡು ರಕ್ಷಣಾ ಉಪಗ್ರಹಗಳನ್ನು ಉಡಾಯಿಸಲು ಇಸ್ರೊ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ನೂತನ ಮಾದರಿಯ ಸಣ್ಣ ಉಪಗ್ರಹ ಉಡಾವಣೆ ವಾಹನ (ಎಸ್‌ಎಸ್‌ಎಲ್‌ವಿ)ಯನ್ನು ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.