ಅಂಗಿಯಲ್ಲಿ ಪಾಕ್ ಧ್ವಜ: 11 ಮಂದಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Update: 2019-02-27 17:51 GMT

ದನ್‌ಬಾದ್, ಫೆ.27: ಪಾಕ್ ಧ್ವಜ ಚಿತ್ರ ಹೊಂದಿರುವ ಅಂಗಿಯನ್ನು ಧರಿಸಿ ಫೋಟೊ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಆರೋಪದಲ್ಲಿ ಜಾರ್ಖಂಡ್‌ನ ದನ್‌ಬಾದ್ ಜಿಲ್ಲೆಯ ಹನ್ನೊಂದು ಯುವಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ಐವರು ಯುವಕರನ್ನು ಬಂಧಿಸಿರುವುದಾಗಿ ದನ್‌ಬಾದ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ತಿಳಿಸಿದ್ದಾರೆ. ಬಂಧಿತರ ಹೆಚ್ಚಿನ ಮಾಹಿತಿಯನ್ನು ನೀಡಲು ಅವರು ನಿರಾಕರಿಸಿದ್ದಾರೆ. ಈ ಭಾವಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇಡೀ ಪ್ರದೇಶದಲ್ಲಿ ಉದ್ವಿಗ್ನತೆ ತಲೆದೋರಿದ್ದು ಜಿಲ್ಲಾಡಳಿತ ಮಂಗಳವಾರ ಸೆಕ್ಷನ್ 144 ಜಾರಿ ಮಾಡಿತ್ತು. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಮಂಗಳವಾರ ಭಾರತೀಯ ವಾಯುಪಡೆ ಪಾಕಿಸ್ತಾನದ ಜೈಶೆ ಮುಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿರುವುದನ್ನು ಸಂಭ್ರಮಿಸುವ ವೇಳೆ ನಿಸ್ರಾ ಬ್ಲಾಕ್‌ನ ನಿವಾಸಿನಗಳು ಈ ಯುವಕರ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News