ಒಐಸಿ ಸಮಾವೇಶದಲ್ಲಿ ಭಾರತ ಪಾಲ್ಗೊಂಡರೆ ಬಹಿಷ್ಕಾರ: ಪಾಕಿಸ್ತಾನ ಎಚ್ಚರಿಕೆ

Update: 2019-02-27 17:53 GMT

ಹೊಸದಿಲ್ಲಿ, ಫೆ.27: ಒಐಸಿ (ಇಸ್ಲಾಮಿಕ್ ಸಹಕಾರ ಸಂಘಟನೆ) ಸಮಾವೇಶದಲ್ಲಿ ಭಾರತ ಪಾಲ್ಗೊಂಡರೆ ಸಮಾವೇಶವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಎಚ್ಚರಿಕೆ ನೀಡಿದೆ.

ಅಬುಧಾಬಿಯಲ್ಲಿ ಮಾರ್ಚ್ 1 ಮತ್ತು 2ರಂದು ಆಯೋಜಿಸಲಾಗಿರುವ ಒಐಸಿಯ ಉದ್ಘಾಟನಾ ಸಮಾರಂಭದಂದು ನಡೆಯುವ ವಿದೇಶ ವ್ಯವಹಾರ ಸಚಿವರ ಸಭೆಯಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಳ್ಳುವಂತೆ ಭಾರತದ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ಗೆ ಆಹ್ವಾನ ನೀಡಲಾಗಿದೆ. 1969ರಲ್ಲಿ ಸ್ಥಾಪನೆಯಾಗಿರುವ ಐಒಸಿಯಲ್ಲಿ 57 ಸದಸ್ಯ ರಾಷ್ಟ್ರಗಳಿದ್ದು ಇದರಲ್ಲಿ 40 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಾಗಿವೆ.

ಒಐಸಿ ಅಥವಾ ಇತರ ಇಸ್ಲಾಮಿಕ್ ಸದಸ್ಯ ರಾಷ್ಟ್ರಗಳ ಬಗ್ಗೆ ನಮಗೇನೂ ಅಸಮಾಧಾನವಿಲ್ಲ. ಆದರೆ ಒಐಸಿ ಸಭೆಯಲ್ಲಿ ಭಾರತದ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಪಾಲ್ಗೊಳ್ಳುವುದಕ್ಕೆ ನಮ್ಮ ಆಕ್ಷೇಪವಿದೆ. ಅವರು ಪಾಲ್ಗೊಂಡರೆ ನಾನು ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನದ ವಿದೇಶ ವ್ಯವಹಾರ ಸಚಿವ ಶಾ ಮೆಹ್ಮೂದ್ ಖುರೇಶಿ ಹೇಳಿದ್ದಾರೆ. ಭಾರತ-ಪಾಕ್ ನಡುವೆ ಈಗ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಟರ್ಕಿ ದೇಶ ಪಾಕ್‌ಗೆ ಬೆಂಬಲ ಸೂಚಿಸಿದೆ ಎಂದವರು ಹೇಳಿದ್ದಾರೆ. ಟರ್ಕಿಯ ವಿದೇಶ ವ್ಯವಹಾರ ಸಚಿವರು ದೂರವಾಣಿ ಕರೆ ಮಾಡಿ ಪಾಕ್ ಸರಕಾರ ಹಾಗೂ ಪಾಕ್ ಜನತೆಗೆ ಟರ್ಕಿ ದೇಶದ ಬೆಂಬಲ ಸೂಚಿಸಿದ್ದಾರೆ ಎಂದವರು ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News