ಸುರತ್ಕಲ್‌ನಲ್ಲಿ ಟೋಲ್ ನೀಡದೆ ಪ್ರಯಾಣ: ಜನಾಗ್ರಹ ಸಭೆಯಲ್ಲಿ ಸ್ಥಳೀಯರ ನಿರ್ಧಾರ

Update: 2019-02-28 08:48 GMT

ಮಂಗಳೂರು, ಫೆ.28: ಹಲವಾರು ಸುತ್ತಿನ ಹೋರಾಟ, ಧರಣಿಯ ಹೊರತಾಗಿಯೂ ಸುರತ್ಕಲ್‌ನ ಅಕ್ರಮ ಟೋಲ್ ಗೇಟ್ ಮುಚ್ಚದೆ ಇದೀಗ ಮಾ.1ರಿಂದ ಸ್ಥಳೀಯ ಖಾಸಗಿ ವಾಹನಗಳಿಂದಲೂ ಟೋಲ್ ಸಂಗ್ರಹಿಸುವ ನಿರ್ಧಾರವನ್ನು ವಿರೋಧಿಸಿ ಟೋಲ್ ನೀಡದೆ ಪ್ರಯಾಣಿಸುವ ಮೂಲಕ ಪ್ರತಿಭಟಿಸಲು ಸ್ಥಳೀಯರು ನಿರ್ಧರಿಸಿದ್ದಾರೆ.

ಸುರತ್ಕಲ್ ಟೋಲ್‌ಗೇಟ್ ಸಮೀಪ ಇಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ಪಕ್ಷಗಳ ನಾಯಕರ ಸಹಭಾಗಿತ್ವದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಮಾ.1ರಂದು ಸ್ಥಳೀಯ ವಾಹನಗಳು ಟೋಲ್ ನೀಡದೆ ಪ್ರತಿಭಟಿಸುವ ಮೂಲಕ ಸಂಬಂಧಪಟ್ಟವರ ಗಮನ ಸೆಳೆಯಲು ನಿರ್ಧರಿಸಲಾಗಿದೆ.

ಜನಾಗ್ರಹ ಸಭೆಯನುದ್ದೇಶಿಸಿ ಮಾತನಾಡಿದ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, 40 ಕಿ.ಮೀ. ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಸಂಗ್ರಹ ಇರಬಾರದೆಂದ ನಿಯಮಗಳ ಹೊರತಾಗಿಯೂ ಹೆಜಮಾಡಿ ಹಾಗೂ ಸುರತ್ಕಲ್‌ನಲ್ಲಿ ಎರಡೆರಡು ಟೋಲ್ ಗೇಟ್‌ಗಳನ್ನು ನಿರ್ಮಿಸಿ ಸಾರ್ವಜನಿಕರಿಂದ ಹಣ ಸುಲಿಗೆ ನಡೆಸಲಾಗುತ್ತಿದೆ. ಹೋರಾಟದ ಪರಿಣಾಮವಾಗಿ ಸುರತ್ಕಲ್‌ನಲ್ಲಿರುವ ಅವೈಜ್ಞಾನಿಕ ಹಾಗೂ ಅಕ್ರಮ ಟೋಲ್ ಗೇಟನ್ನು ಹೆಜಮಾಡಿ ಟೋಲ್ ಪ್ಲಾಝಾದ ಜತೆ ವಿಲೀನಗೊಳಿಸುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದರೂ ಅದು ಈಡೇರಿಕೆಯಾಗಿಲ್ಲ. ಇದರ ನಡುವೆಯೇ ಇದೀಗ ಸ್ಥಳೀಯ ಖಾಸಗಿ ವಾಹನಗಳಿಗೆ ನೀಡಲಾಗಿದ್ದ ರಿಯಾಯಿತಿ ತೆರವುಗೊಳಿಸಿ ಟೋಲ್ ಪಾವತಿಸಲು ಸೂಚಿಸುವ ಮೂಲಕ ಲೂಟಿಗೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟೋಲ್‌ನ ಗುತ್ತಿಗೆ ವಹಿಸಿರುವ ಸಂಸ್ಥೆಯ ಈ ಉದ್ಧಟತನಕ್ಕೆ ಪ್ರತಿಯಾಗಿ ಮಾ.1ರಂದು ಬೆಳಗ್ಗಿನಿಂದಲೇ ಸ್ಥಳೀಯ ವಾಹನಗಳನ್ನು ಟೋಲ್ ಗೇಟಿನೆದುರು ನಿಲ್ಲಿಸಿ ಟೋಲ್ ಪಾವತಿಸದೆ ಪ್ರತಿಭಟಿಸಲಾಗುವುದು. ಈ ಸಂದರ್ಭ ಉಂಟಾಗುವ ಯಾವುದೇ ರೀತಿಯ ಕಾನೂನು ಸಂಘರ್ಷಕ್ಕೆ ಸಂಬಂಧಪಟ್ಟ ಇಲಾಖೆ ಹೊಣೆಯಾಗಿರುತ್ತದೆ ಎಂದು ಅವರು ಎಚ್ಚರಿಸಿದರು.

ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಮಾತನಾಡಿ, ಸುರತ್ಕಲ್‌ನ ಅವೈಜ್ಞಾನಿಕ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಂದ ಟೋಲ್ ಪಾವತಿಗೆ ರಿಯಾಯಿತಿ ನೀಡಲಾಗಿತ್ತು. ಇದೀಗ ಸರಕಾರವಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ಜಿಲ್ಲಾಧಿಕಾರಿಯವರ ಆದೇಶದ ಹೊರತಾಗಿಯೂ ಗುತ್ತಿಗೆದಾರರೇ ಸ್ಥಳೀಯ ವಾಹನಗಳಿಗೂ ಟೋಲ್ ಪಾವತಿ ಕಡ್ಡಾಯಗೊಳಿಸುವುದೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ಸಾರ್ವಜನಿಕರು ಹಲವಾರು ರೀತಿಯಲ್ಲಿ ಸರಕಾರಕ್ಕೆ ತೆರಿಗೆಯನ್ನು ಪಾವತಿಸುತ್ತಾರೆ. ದೇಶದಲ್ಲಿಯೇ ಕರ್ನಾಟಕ ರಾಜ್ಯ ತೆರಿಗೆ ಪಾವತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಅದರ ನಡುವೆ 9 ಕಿ.ಮೀ. ನಡುವೆ ಎರಡೆರಡು ಕಡೆ ಟೋಲ್ ಪಾವತಿಸುವ ಕ್ರಮದ ಮೂಲಕ ಬುದ್ಧಿವಂತ ನಗರದ ಜನರನ್ನು ಮೋಸಗೊಳಿಸಲಾಗುತ್ತಿದೆ. ಇದಕ್ಕೆ ಸ್ಥಳೀಯರು ಟೋಲ್ ಪಾವತಿಸದೆ ಪ್ರತಿಭಟಿಸುವ ಮೂಲಕ ಪ್ರತಿರೋಧವನ್ನು ತೋರಲಿದ್ದಾರೆ ಎಂದರು.

ಜನಾಗ್ರಹ ಸಭೆಯನ್ನುದ್ದೇಶಿಸಿ ನ್ಯಾಯವಾದ ದಿನೇಶ್ ಹೆಗ್ಡೆ ಉಳೇಪಾಡಿ, ಮಾಜಿ ಸಚಿವ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾರ್ಪೊರೇಟರ್ ರೇವತಿ ಪುತ್ರನ್, ಜೆಡಿಎಸ್ ಜಿಲ್ಲಾ ನಾಯಕ ಇಕ್ಬಾಲ್ ಮುಲ್ಕಿ ಮೊದಲಾದವರು ಮಾತನಾಡಿದರು.

ಸಭೆಯಲ್ಲಿ ಮನೋಹರ್ ಶೆಟ್ಟಿ, ಸಲೀಂ ಸ್ಯಾಡೋ, ಸುಭಾಶ್ಚಂದ್ರ ಶೆಟ್ಟಿ, ಹರೀಶ್ ಪುತ್ರನ್, ಯೋಗೀಶ್, ಹುಸೈನ್ ಕಾಟಿಪಳ್ಳ, ಮೂಸಬ್ಬ ಪಕ್ಷಿಕೆರೆ, ಅಹ್ಮದ್ ಬಾವ, ಧನಂಜಯ ಮಲ್ಲಿ, ಸುನೀಲ್ ಕುಮಾರ್ ಬಜಾಲ್, ದಿನೇಶ್ ಕುಂಬಲ, ಶೇಖರ್ ಹೆಜಮಾಡಿ, ರಾಘವೇಂದ್ರ ರಾವ್, ಚಿತ್ತರಂಜನ್ ಶೆಟ್ಟಿ, ಸತ್ಯೇಂದ್ರ ಶೆಟ್ಟಿ, ಹಿಲ್ಡಾ ಆಳ್ವ, ರಾಜೇಶ್ ಶೆಟ್ಟಿ, ಆಶಾ ಬೋಳೂರು, ವಸಂತ ಬೆರ್ನಾಡ್ ಮೊದಲಾವರು ನೇತೃತ್ವ ವಹಿಸಿದ್ದರು.

ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಸಭೆಯನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News