20 ತಿಂಗಳ ಸೆರೆಯ ಬಳಿಕ ಇಸ್ರೇಲ್‌ನಿಂದ ಫೆಲೆಸ್ತೀನ್ ಸಂಸದೆಯ ಬಿಡುಗಡೆ

Update: 2019-02-28 16:20 GMT

ಟೆಲ್ ಅವೀವ್ (ಇಸ್ರೇಲ್), ಫೆ. 28: ಯಾವುದೇ ಆರೋಪಗಳಿಲ್ಲದೆ 20 ತಿಂಗಳು ಜೈಲಿನಲ್ಲಿ ಇರಿಸಿದ ಬಳಿಕ, ಫೆಲೆಸ್ತೀನಿ ಸಂಸದೆ ಖಾಲಿದಾ ಜರಾರ್‌ರನ್ನು ಇಸ್ರೇಲ್ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.

56 ವರ್ಷದ ಖಾಲಿದಾರನ್ನು ಗುರುವಾರ ಬಿಡುಗಡೆ ಮಾಡಲಾಯಿತು ಎಂದು ಅವರ ಪತಿ ಗಝನ್ ಜರಾರ್ ತಿಳಿಸಿದರು.

ಅವರನ್ನು ‘ಆಡಳಿತಾತ್ಮಕ ಬಂಧನ’ದಲ್ಲಿ ಇಡಲಾಗಿತ್ತು. ಇಸ್ರೇಲ್‌ನ ಈ ನಿಯಮದ ಅನ್ವಯ ಜನರನ್ನು ಯಾವುದೇ ಆರೋಪಗಳಿಲ್ಲದೆ ತಿಂಗಳುಗಳ ಕಾಲ ಬಂಧನದಲ್ಲಿಡಬಹುದಾಗಿದೆ.

2015ರಲ್ಲಿ, ‘ಹಿಂಸೆಗೆ ಪ್ರಚೋದನೆ ನೀಡಿದ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡಿದ’ ಆರೋಪದಲ್ಲಿ ಅವರಿಗೆ 15 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

‘ಪಾಪ್ಯುಲರ್ ಫ್ರಂಟ್ ಫಾರ್ ದ ಲಿಬರೇಶನ್ ಆಫ್ ಫೆಲೆಸ್ತೀನ್’ನ ಹಿರಿಯ ಸದಸ್ಯೆಯಾಗಿರುವ ಅವರನ್ನು 2017ರ ಜುಲೈನಲ್ಲಿ ಮತ್ತೆ ಬಂಧಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲೇ ಇದ್ದರು.

ಅವರನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಬೇಕಾಗಿತ್ತು. ಬಳಿಕ ಅವರ ಬಂಧನವನ್ನು ಮತ್ತೆ ನಾಲ್ಕು ತಿಂಗಳು ವಿಸ್ತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News