ಸೌಹಾರ್ದತೆಯ ಸಂಕೇತವಲ್ಲ, ಜಿನೇವ ಒಪ್ಪಂದದಂತೆ ಪೈಲಟ್ ಬಿಡುಗಡೆ : ಭಾರತ

Update: 2019-02-28 17:36 GMT

ಹೊಸದಿಲ್ಲಿ, ಫೆ.28: ಪಾಕಿಸ್ತಾನದ ವಶದಲ್ಲಿರುವ ಭಾರತದ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಿಡುಗಡೆಗೊಂಡು ಭಾರತಕ್ಕೆ ಮರಳಲಿದ್ದಾರೆ ಎಂಬ ವರದಿಯಿಂದ ಸಂತಸವಾಗಿದೆ ಎಂದು ಭಾರತೀಯ ವಾಯಪಡೆ ತಿಳಿಸಿದೆ. ಆದರೆ ಇದು ಸದ್ಭಾವನೆಯ ಸಂಕೇತ ಎಂಬ ಹೇಳಿಕೆಯನ್ನು ತಳ್ಳಿಹಾಕಿರುವ ವಾಯುಪಡೆ, ಈ ಕ್ರಮಕ್ಕೆ ಜಿನೇವ ಒಪ್ಪಂದ ಕಾರಣ ಎಂದು ತಿಳಿಸಿದೆ.

ಶುಕ್ರವಾರ ಅಭಿನಂದನ್ ಮರಳಿ ಬರುವ ಘಳಿಗೆಗಾಗಿ ಕಾಯುತ್ತಿದ್ದೇವೆ ಎಂದು ಏರ್ ವೈಸ್‌ಮಾರ್ಷಲ್ ಆರ್‌ಜಿಕೆ ಕಪೂರ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಗುರುವಾರ ಪಾಕಿಸ್ತಾನದ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಶಾಂತಿಯ ಸಂಕೇತವಾಗಿ ಶುಕ್ರವಾರ ಭಾರತದ ಪೈಲಟ್ ಅಭಿನಂದನ್‌ರನ್ನು ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದ್ದರು.

ಇದೊಂದು ಸದ್ಭಾವನೆಯ ಸಂಕೇತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿನೇವ ಒಪ್ಪಂದದಂತೆ ನಡೆದ ಬಿಡುಗಡೆ ಪ್ರಕ್ರಿಯೆ ಎಂಬುದು ನಮ್ಮ ನಿಲುವಾಗಿದೆ ಎಂದರು.ಬಾಲಕೋಟ್‌ನಲ್ಲಿ ಉಗ್ರರ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಭಾರತದ ವಿಮಾನಗಳು ಗುರಿಯ ಮೇಲೆ ದಾಳಿ ನಡೆಸಿಲ್ಲ ಎಂಬ ವರದಿಯ ಬಗ್ಗೆ ಉಲ್ಲೇಖಿಸಿದ ಅವರು, ಈ ದಾಳಿಯ ಕುರಿತು ವಾಯುಪಡೆಯ ಬಳಿ ಸಾಕ್ಷಾಧಾರಗಳಿವೆ. ಇವನ್ನು ಯಾವತ್ತು ಮತ್ತು ಹೇಗೆ ಬಿಡುಗಡೆ ಮಾಡಬೇಕು ಎಂಬುದನ್ನು ರಾಜಕೀಯ ಮುಖಂಡರು ನಿರ್ಧರಿಸಬೇಕಿದೆ ಎಂದರು.

ವಾಯುಪಡೆಯ ದಾಳಿ ಯಶಸ್ವಿಯಾಗಿದೆ ಎಂಬುದನ್ನು ದೃಢಪಡಿಸಲು ವಿಶ್ವಾಸಾರ್ಹ ದಾಖಲೆಗಳಿವೆ. ಆದರೆ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂಬುದನ್ನು ಹಾಗೂ ನಷ್ಟದ ಪ್ರಮಾಣವನ್ನು ಅಂದಾಜಿಸಲು ಇದು ಸೂಕ್ತ ಸಮಯವಲ್ಲ ಎಂದವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಸೇನಾಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು, ಭೂಮಿ ಅಥವಾ ಜಲಮಾರ್ಗದಿಂದ ಎದುರಾಗಬಹುದಾದ ಯಾವುದೇ ಅಪಾಯವನ್ನು ಎದುರಿಸಲೂ ಸಶಸ್ತ್ರ ಪಡೆಗಳು ಸರ್ವ ಸನ್ನದ್ಧವಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News