ಅಮೆರಿಕದ ನಿಲುವು ಭಾರತವನ್ನು ಉತ್ತೇಜಿಸಿದೆ: ಪಾಕಿಸ್ತಾನ ರಾಯಭಾರಿ

Update: 2019-02-28 17:44 GMT

ವಾಶಿಂಗ್ಟನ್, ಫೆ. 28: ಭಾರತ ನಡೆಸಿರುವ ವಾಯು ಉಲ್ಲಂಘನೆಯನ್ನು ಅಮೆರಿಕ ಖಂಡಿಸಿಲ್ಲ ಹಾಗೂ ಅಮೆರಿಕದ ಈ ನಿಲುವು ಭಾರತವನ್ನು ಮತ್ತಷ್ಟು ಉತ್ತೇಜಿಸಿದೆ ಎಂದು ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿ ಬುಧವಾರ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳು ಬುಧವಾರ ಪರಸ್ಪರರ ವಿಮಾನಗಳನ್ನು ಹೊಡೆದುರುಳಿಸಿದ ಘಟನೆಗೆ ಅಮೆರಿಕ ಭಾರತವನ್ನು ಹೊಣೆಯಾಗಿಸಬೇಕಾಗಿತ್ತು ಎಂದು ಪಾಕಿಸ್ತಾನದ ರಾಯಭಾರಿ ಅಸಾದ್ ಮಜೀದ್ ಖಾನ್ ಹೇಳಿದರು.

‘‘ಇದನ್ನು ಭಾರತೀಯ ನಿಲುವಿನ ಅನುಮೋದನೆ ಎಂಬುದಾಗಿ ಅರ್ಥೈಸಲಾಗಿದೆ. ಇದು ಅವರನ್ನು ಇನ್ನಷ್ಟು ಉತ್ತೇಜಿಸಿದೆ’’ ಎಂದು ಅಮೆರಿಕದ ಹೇಳಿಕೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಹೇಳಿದರು.

ಆದರೆ, ಭಾರತ ಮತ್ತು ಪಾಕಿಸ್ತಾನಗಳ ನಡುವೆ ರಾಜತಾಂತ್ರಿಕ ಸಂಧಾನಕಾರನಾಗಿ ಅಮೆರಿಕ ಹೆಚ್ಚಿನ ಪಾತ್ರ ವಹಿಸಬೇಕೆಂದು ಪಾಕಿಸ್ತಾನ ನಿರೀಕ್ಷಿಸುತ್ತದೆ ಎಂದು ಖಾನ್ ನುಡಿದರು.

‘‘ಈ ಪಾತ್ರವನ್ನು ನಿಭಾಯಿಸಲು ಹೆಚ್ಚು ಸಮರ್ಥವಾದ ದೇಶ ಬೇರೊಂದಿಲ್ಲ’’ ಎಂದು ಉಭಯ ದೇಶಗಳೊಂದಿಗೆ ಅಮೆರಿಕ ಹೊಂದಿರುವ ಸಂಬಂಧವನ್ನು ಪ್ರಸ್ತಾಪಿಸುತ್ತಾ ಅವರು ಅಭಿಪ್ರಾಯಪಟ್ಟರು.

ಪಾಕಿಸ್ತಾನದ ಬಾಲಕೋಟ್‌ನಲ್ಲಿನ ಭಯೋತ್ಪಾದಕ ಶಿಬಿರವೊಂದರ ಮೇಲೆ ಭಾರತೀಯ ಯುದ್ಧ ವಿಮಾನಗಳು ಮಂಗಳವಾರ ಮುಂಜಾನೆ ನಡೆಸಿದ ದಾಳಿಯನ್ನು ‘ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ’ ಎಂಬುದಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಬಣ್ಣಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News