ಅಗ್ರ 10ರಲ್ಲಿ ಕೆ.ಎಲ್.ರಾಹುಲ್
ದುಬೈ, ಫೆ.28: ಆಸ್ಟ್ರೇಲಿಯ ವಿರುದ್ಧ ಎರಡು ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ಮೂಲಕ ಗಮನಸೆಳೆದ ಕರ್ನಾಟಕದ ದಾಂಡಿಗ ಕೆ.ಎಲ್.ರಾಹುಲ್ ಐಸಿಸಿ ಟಿ20 ರ್ಯಾಂಕಿಂಗ್‌ನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ 10ರಲ್ಲಿ (6) ಸ್ಥಾನ ಪಡೆದಿದ್ದಾರೆ. ಇನ್ನೊಂದೆಡೆ 31 ಸ್ಥಾನ ಏರಿಕೆ ಕಂಡಿರುವ ಅಫ್ಘಾನಿಸ್ತಾನ ದಾಂಡಿಗ ಹಝ್ರತುಲ್ಲಾ ಝಝೈ ಜೀವನಶ್ರೇಷ್ಠ 7ನೇ ಸ್ಥಾನ ಪಡೆದಿದ್ದಾರೆ. ಆಸೀಸ್ ವಿರುದ್ಧ ನಡೆದ ಎರಡು ಟಿ20 ಪಂದ್ಯಗಳಲ್ಲಿ ಕ್ರಮವಾಗಿ 50 ಹಾಗೂ 47 ರನ್ ಗಳಿಸಿದ ಭಾರತದ ರಾಹುಲ್ ಬಳಿ ಸದ್ಯ 726 ರೇಟಿಂಗ್ ಪಾಯಿಂಟ್ಸ್‌ಗಳಿವೆ. ಈ ಪಟ್ಟಿಯಲ್ಲಿ ಮಾಜಿ ಅಗ್ರಸ್ಥಾನಿ ದಾಂಡಿಗ ವಿರಾಟ್ ಕೊಹ್ಲಿ ಎರಡು ಸ್ಥಾನ ಭಡ್ತಿ ಪಡೆದು 17ನೇ ಸ್ಥಾನ ಹಾಗೂ ಧೋನಿ ಏಳು ಸ್ಥಾನ ಏರಿಕೆ ಕಂಡು 56ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್ ಬುಮ್ರಾ(15) ಕೃಣಾಲ್ ಪಾಂಡ್ಯ( ಜೀವನಶ್ರೇಷ್ಠ 43) ಹಾಗೂ ಕುಲದೀಪ್ ಯಾದವ್ 4ನೇ ಸ್ಥಾನ ಅಲಂಕರಿಸಿದ್ದಾರೆ.
ಆಸ್ಟ್ರೇಲಿಯ ದಾಂಡಿಗ ಮ್ಯಾಕ್ಸ್ ವೆಲ್(3) ಹಾಗೂ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಆಟವಾಡಿದ್ದ ಅಫ್ಘಾನಿಸ್ತಾನದ ಹಝ್ರತುಲ್ಲಾ(7) ದಾಂಡಿಗರ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ.
2ನೇ ಸ್ಥಾನ ಉಳಿಸಿಕೊಂಡ ಭಾರತ
ಇನ್ನು ತಂಡಗಳ ರ್ಯಾಂಕಿಂಗ್‌ನಲ್ಲಿ ಭಾರತ 2ನೇ ಸ್ಥಾನವನ್ನು(122 ರೇಟಿಂಗ್ ಅಂಕ) ಉಳಿಸಿಕೊಂಡಿದ್ದು, ದ.ಆಫ್ರಿಕ ಹಾಗೂ ಇಂಗ್ಲೆಂಡ್ ತಂಡಗಳನ್ನು ಹಿಂದಿಕ್ಕಿರುವ ಆಸ್ಟ್ರೇಲಿಯ 3ನೇ ಸ್ಥಾನದಲ್ಲಿ ವಿರಾಜಮಾನವಾಗಿದೆ. ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ಕ್ರಮವಾಗಿ 8 ಹಾಗೂ 17ನೇ ಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿ ಪಾಕಿಸ್ತಾನ ತಂಡ 135 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಭಾರತಕ್ಕಿಂತ 13 ಅಂಕ ಮುಂದಿದೆ.