ಭಾರತ, ಪಾಕ್ ಪರಮಾಣುಶಕ್ತ ದೇಶಗಳೆಂದು ಮಾನ್ಯ ಮಾಡಿಲ್ಲ: ಚೀನಾ

Update: 2019-03-01 15:14 GMT

ಬೀಜಿಂಗ್, ಮಾ. 1: ಭಾರತ ಮತ್ತು ಪಾಕಿಸ್ತಾನಗಳನ್ನು ಪರಮಾಣು ಶಕ್ತ ದೇಶಗಳೆಂದು ತಾನೆಂದೂ ಮಾನ್ಯ ಮಾಡಿಲ್ಲ ಹಾಗೂ ಇಂಥ ಮಾನ್ಯತೆಯನ್ನು ಉತ್ತರ ಕೊರಿಯಕ್ಕೂ ನೀಡುವುದಿಲ್ಲ ಎಂದು ಚೀನಾ ಶುಕ್ರವಾರ ಹೇಳಿದೆ.

‘‘ಭಾರತ ಮತ್ತು ಪಾಕಿಸ್ತಾನಗಳನ್ನು ಪರಮಾಣು ಶಕ್ತ ದೇಶಗಳೆಂದು ಚೀನಾ ಯಾವತ್ತೂ ಗುರುತಿಸಿಲ್ಲ. ಈ ಕುರಿತ ನಮ್ಮ ನಿಲುವು ಯಾವತ್ತೂ ಬದಲಾಗಿಲ್ಲ’’ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ವಿಯೆಟ್ನಾಮ್‌ನಲ್ಲಿ ನಡೆದ ಎರಡನೇ ಶೃಂಗ ಸಮ್ಮೇಳನ ವಿಫಲವಾದ ಹಿನ್ನೆಲೆಯಲ್ಲಿ, ಭಾರತ ಮತ್ತು ಪಾಕಿಸ್ತಾನಗಳಂತೆ ಉತ್ತರ ಕೊರಿಯಕ್ಕೂ ಪರಮಾಣು ಶಕ್ತ ದೇಶ ಸ್ಥಾನಮಾನವನ್ನು ನೀಡುವಿರೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಭಾರತವು ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂಬ ಆಧಾರದಲ್ಲಿ 48 ಸದಸ್ಯರ ಪರಮಾಣು ಪೂರೈಕೆದಾರರ ಗುಂಪಿಗೆ ಭಾರತದ ಪ್ರವೇಶವನ್ನು ಚೀನಾ ತಡೆಯುತ್ತಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News