ಗಾಯತ್ರಿ, ಸಾಮಿಯಾ ಮೂರನೇ ಸುತ್ತಿಗೆ
ಹೊಸದಿಲ್ಲಿ, ಮಾ.1: ಕಠಿಣ ಹೋರಾಟ ಕಂಡುಬಂದ ಪಂದ್ಯಗಳಲ್ಲಿ ಜಯ ಗಳಿಸಿದ ಭಾರತೀಯ ಬ್ಯಾಡ್ಮಿಂಟನ್ ತಾರೆಗಳಾದ ಸಾಮಿಯಾ ಫಾರೂಕಿ ಹಾಗೂ ಗಾಯತ್ರಿ ಗೋಪಿಚಂದ್ ಹಾಲೆಂಡ್‌ನ ಹರ್ಲೆಮ್‌ನಲ್ಲಿ ನಡೆಯುತ್ತಿರುವ ಡಚ್ ಜೂನಿಯರ್ ಅಂತರ್‌ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
2017ರ ಏಶ್ಯಾಡ್ ಜೂನಿಯರ್ ಚಾಂಪಿಯನ್‌ಶಿಪ್‌ನ ಅಂಡರ್-15 ವಿಭಾಗದಲ್ಲಿ ಚಿನ್ನದ ಪದಕ ವಿಜೇತೆ ಸಾಮಿಯಾ, ಲಿನ್ ಜು ಯುನ್ ಅವರನ್ನು 21-17, 21-14 ಗೇಮ್‌ಗಳ ಅಂತರದಿಂದ ಮಣಿಸಿದರು. ಇನ್ನೊಂದೆಡೆ ಗಾಯತ್ರಿ ಅವರು ಡೆನ್ಮಾರ್ಕ್ ನ ಲಾರಾ ಫ್ಲೋಝ್ ಥಾಮ್ಸನ್ ಅವರನ್ನು 18-21, 21-15, 21-9 ಗೇಮ್‌ಗಳ ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಸೋಲಿಸಿ ಮುಂದಿನ ಸುತ್ತಿಗೆ ಕಾಲಿಟ್ಟರು. ನಾಸಿಕ್ ಮೂಲದ 12ನೇ ಶ್ರೇಯಾಂಕ ಪಡೆದಿರುವ ಸ್ಮಿತಾ ತೋಶ್ನಿವಾಲ ಅವರು ನಾದಿಯಾ ಚೋಕರಿ ಅವರನ್ನು 28 ನಿಮಿಷಗಳ ಆಟದಲ್ಲಿ 21-15, 21-17 ಗೇಮ್‌ಗಳಿಂದ ಮಣಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದರು.