ಮೊಹಾಲಿ, ದಿಲ್ಲಿಯಿಂದ ಏಕದಿನ ಪಂದ್ಯ ಸ್ಥಳಾಂತರಗೊಳಿಸುವ ಯೋಜನೆಯಿಲ್ಲ: ಬಿಸಿಸಿಐ
ಹೈದರಾಬಾದ್,ಮಾ.1: ಆಸ್ಟ್ರೇಲಿಯ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ಮೊಹಾಲಿ ಹಾಗೂ ದಿಲ್ಲಿಯಿಂದ ಬೇರೆಡೆಗೆ ಸ್ಥಳಾಂತರಿಸುವ ಯೋಜನೆಯಿಲ್ಲ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಹೇಳಿದ್ದಾರೆ. ನೆರೆಯ ರಾಷ್ಟ್ರ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತೀಯ ವಾಯುಸೀಮೆಯೊಳಗೆ ಪ್ರವೇಶಿಸಲು ಯತ್ನಿಸಿದ ಬಳಿಕ ಉಭಯ ದೇಶಗಳ ಮಧ್ಯೆ ಉದ್ವಿಗ್ನತೆ ನೆಲೆಸಿದೆ. ಹೀಗಾಗಿ ಬಿಸಿಸಿಐ ಕೊನೆಯ ಎರಡು ಪಂದ್ಯಗಳನ್ನು ಮೊಹಾಲಿ ಹಾಗೂ ದಿಲ್ಲಿಯಿಂದ ಸ್ಥಳಾಂತರಗೊಳಿಸಲಿದೆೆ ಎಂದು ವರದಿಯಾಗಿತ್ತು.
ನಾಲ್ಕನೇ ಏಕದಿನ ಪಂದ್ಯ ಮೊಹಾಲಿಯಲ್ಲಿ ಮಾ.10ರಂದು, 5ನೇ ಪಂದ್ಯ ಮಾ.13 ರಂದು ದಿಲ್ಲಿಯಲ್ಲಿ ನಿಗದಿಯಾಗಿದೆ. ವರದಿ ಪ್ರಕಾರ ಒಂದು ಪಂದ್ಯ ಸೌರಾಷ್ಟ್ರಕ್ಕೆ ವರ್ಗಾವಣೆಯಾಗಲಿದೆ. ‘‘ಈಗಾಗಲೇ ನಿಗದಿಪಡಿಸಿರುವ ತಾಣದಿಂದ ಬೇರೆಡೆಗೆ ಪಂದ್ಯಗಳನ್ನು ಸ್ಥಳಾಂತರಗೊಳಿಸುವ ಯಾವುದೇ ಖಚಿತ ಯೋಜನೆಯಿಲ್ಲ. ವೇಳಾಪಟ್ಟಿಯಂತೆಯೇ ಎರಡೂ ಪಂದ್ಯಗಳು ಮೊಹಾಲಿ ಹಾಗೂ ದಿಲ್ಲಿಯಲ್ಲೇ ನಡೆಯಲಿದೆ ಎಂದು ನಾನು ಖಚಿತಪಡಿಸುವೆ’’ ಎಂದು ಖನ್ನಾ ಹೇಳಿದ್ದಾರೆ.