ಕ್ರಿಕೆಟ್ ಗುತ್ತಿಗೆ: ತಾಹಿರ್ ಡುಮಿನಿಗೆ ಸ್ಥಾನವಿಲ್ಲ
ಡರ್ಬನ್, ಮಾ.1: ದ. ಆಫ್ರಿಕ ಕ್ರಿಕೆಟಿಗರ 2019-20ರ ಸಾಲಿನ ಗುತ್ತಿಗೆ ನವೀಕರಣವಾಗಿದ್ದು ತಂಡದ ಪ್ರಮುಖ ಸ್ಪಿನ್ನರ್ ಇಮ್ರಾನ್ ತಾಹಿರ್, ಆಲ್‌ರೌಂಡರ್‌ಗಳಾದ ಜೆ.ಪಿ .ಡುಮಿನಿ ಹಾಗೂ ಕ್ರಿಸ್ ಮೊರಿಸ್ ಅವರನ್ನು ಗುತ್ತಿಗೆಯಿಂದ ಕೈಬಿಡಲಾಗಿದೆ. ಈ ಕುರಿತು ದ.ಆಫ್ರಿಕ ಕ್ರಿಕೆಟ್ ಮಂಡಳಿ ಶುಕ್ರವಾರ ಪ್ರಕಟನೆ ನೀಡಿದೆ.
ಮೇನಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ ದ.ಆಫ್ರಿಕ ತಂಡದಲ್ಲಿ ಡುಮಿನಿ ಹಾಗೂ ತಾಹಿರ್ ಸ್ಥಾನ ಪಡೆಯುವುದನ್ನು ನಿರೀಕ್ಷ್ಷಿಸಲಾಗಿತ್ತು. ಆದರೆ ಮಂಡಳಿ ಅವರನ್ನು ಕಡೆಗಣಿಸುವುದರ ಮೂಲಕ ಈ ಕ್ರಿಕೆಟಿಗರ ನಿವೃತ್ತಿಗೆ ಹಸಿರು ನಿಶಾನೆ ತೋರಿದಂತೆ ಕಾಣುತ್ತದೆ.
ವಿಶ್ವಕಪ್ ನಡೆಯುವ ವೇಳೆಗೆ ಪಾಕಿಸ್ತಾನ ಮೂಲದ ತಾಹಿರ್ 40ನೇ ವಯಸ್ಸಿಗೆ ತಲುಪಲಿದ್ದಾರೆ. ಆದರೆ ಅವರು ದ.ಆಫ್ರಿಕದ ಪ್ರಮುಖ ಬೌಲರ್ ಆಗಿದ್ದು, ನಿಗದಿತ ಓವರ್‌ಗಳ ಟೂರ್ನಿಗಳಲ್ಲಿ ಮೋಡಿ ಮಾಡಬಲ್ಲರು.
ಭುಜನೋವಿಗೆ ಒಳಗಾಗಿರುವ ಆಲ್‌ರೌಂಡರ್ ಡುಮಿನಿ 5 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದು, ಶುಕ್ರವಾರ ಸ್ಥಳೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಲಿದ್ದಾರೆ. ಮತ್ತೊಂದೆಡೆ ಕ್ರಿಸ್ ಮೊರಿಸ್ ಬಹುದಿನಗಳಿಂದ ಅಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆಲ್‌ರೌಂಡರ್ ಸ್ಥಾನದಲ್ಲಿ ಅವರನ್ನು ಹಿಂದಿಕ್ಕಿ ಆ್ಯಂಡಿಲೆ ಫೆಹ್ಲುಕ್ವಾಯೊ ಹಾಗೂ ವಿಯಾನ್ ಮುಲ್ಡರ್ ಸ್ಥಾನ ಪಡೆಯುತ್ತಿದ್ದಾರೆ.