ಭಾರತದ ಮುಸ್ಲಿಂ ಯುವತಿಯರಿಗೆ ನೀರು ಎರಚಿ ಕಿರುಕುಳ: ವೈರಲ್ ವೀಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ

Update: 2019-03-02 15:58 GMT

ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎನ್ನುವ ತಲೆಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಸಾವಿರಾರು ಮಂದಿ ಶೇರ್ ಮಾಡಿದ್ದಾರೆ.

ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ಹೇಳಿದ ನಂತರ ಈ ವಿಡಿಯೋ ಹರಿದಾಡತೊಡಗಿತು. ಪಾಕಿಸ್ತಾನದ ರಾಜಕೀಯ ವಿಶ್ಲೇಷಕ ಝೈದ್ ಹಮೀದ್ ಕೂಡಾ ಈ ವಿಡಿಯೊ ಶೇರ್ ಮಾಡಿದವರಲ್ಲಿ ಸೇರಿದ್ದು, ಇದರಲ್ಲಿ ಹುಡುಗರ ಗುಂಪೊಂದು ಬುರ್ಖಾಧಾರಿ ಮಹಿಳೆಯ ಮೇಲೆ ನೀರು ಎರಚುತ್ತಿರುವ ದೃಶ್ಯಗಳಿವೆ. ಈ ವಿಡಿಯೊವನ್ನು ಶೇರ್ ಮಾಡಿದ ಅವರು, "ಭಾರತದ ಜನತೆಗೆ ಮಾನವ ಘನತೆ ಬಗ್ಗೆ ಮತ್ತು ಮಹಿಳೆಯರು ಹಾಗೂ ಮಕ್ಕಳ ಗೌರವದ ಬಗ್ಗೆ ಕಾಳಜಿ ಇಲ್ಲ” ಎಂದಿದ್ದರು.

ಮತ್ತೊಬ್ಬ ಪಾಕಿಸ್ತಾನಿ ಟ್ವೀಟರ್, ಈ ವಿಡಿಯೊವನ್ನು ಉರ್ದು ಶೀರ್ಷಿಕೆಯೊಂದಿಗೆ ಶೇರ್ ಮಾಡಿದ್ದಾರೆ. ಇದರ ಇಂಗ್ಲಿಷ್ ಭಾಷಾಂತರ ಹೀಗಿದೆ, "ಹಿಂದೂ ಉಗ್ರಗಾಮಿಗಳು ಮುಸ್ಲಿಂ ವಿದ್ಯಾರ್ಥಿನಿಯನ್ನು ಅವಮಾನಿಸುತ್ತಿರುವುದು"

ಈ ವಿಡಿಯೊ ತುಣುಕನ್ನು ಅಝಾದ್ ಕಾಶ್ಮೀರ್ ಮೂಲದ ಅಬ್ದುಲ್ ರವೂಫ್ ಸಿದ್ದಿಕಿ ಎಂಬವರು ಪೋಸ್ಟ್ ಮಾಡಿದ್ದು, 28 ಸಾವಿರಕ್ಕೂ ಹೆಚ್ಚು ಬಾರಿ ಇದು ಶೇರ್ ಆಗಿದೆ.

ವಾಸ್ತವ ಏನು?

altnews.in ಈ ವಿಡಿಯೊ ಮೂಲವನ್ನು ಪತ್ತೆ ಮಾಡಿದಾಗ, ಇದು 2019ರ ಫೆಬ್ರವರಿ 23ನೇ ತಾರೀಕಿನದ್ದು ಎಂದು ದೃಢಪಟ್ಟಿದೆ. ಶ್ರೀಲಂಕಾದ ಈಸ್ಟರ್ನ್ ವಿವಿಯಲ್ಲಿ ರ್ಯಾಗಿಂಗ್ ಘಟನೆ ನಡೆಯುತ್ತಿದೆ ಎಂದು ಕೆಲ ಬಳಕೆದಾರರು ಇದನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೊದಲ್ಲಿರುವ ಧ್ವನಿಯನ್ನು ಸ್ಪಷ್ಟವಾಗಿ ಆಲಿಸಿದರೆ, ಜನ ತಮಿಳು ಭಾಷೆಯಲ್ಲಿ ಮಾತನಾಡುವುದು ಕೇಳಿಸುತ್ತದೆ. ಇದು ಶ್ರೀಲಂಕಾದ ಪ್ರಭಾವಿ ಭಾಷೆಗಳಲ್ಲೊಂದು.

ಶ್ರೀಲಂಕಾ ನಿವಾಸಿ ಮುಹಮ್ಮದ್ ಸರ್ಜೂನ್ ಎಂಬವರು ಈ ಘಟನೆ ಬಗ್ಗೆ ಪೋಸ್ಟ್ ಮಾಡಿದ್ದರು. ಮತ್ತೊಬ್ಬ ಶ್ರೀಲಂಕಾ ನಾಗರಿಕ, ಇಂಥದ್ದೇ ವಿಡಿಯೊವನ್ನು ಫೆಬ್ರವರಿ 24ರಂದು ಅಪ್‍ ಲೋಡ್ ಮಾಡಿದ್ದಾರೆ. ಸಿಲೋನ್‍ ಎಂಬ ಹೆಸರಿನ ತಮಿಳು ವೆಬ್ ಸೈಟ್ ಕೂಡಾ ಈ ಘಟನೆಯ ಬಗ್ಗೆ ಬರೆದಿರುವುದು altnews.in ಗಮನಕ್ಕೆ ಬಂದಿದೆ.

ರ್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಬ್‍ಸೈಟ್ ಮತ್ತೊಂದು ಲೇಖನವನ್ನು ಪ್ರಕಟಿಸಿದ್ದು, ಹುಡುಗರು ಬಕೆಟ್‍ ಗಟ್ಟಲೆ ನೀರು ಎರಚುತ್ತಿರುವ ಇಂಥದ್ದೇ ಮತ್ತೊಂದು ವಿಡಿಯೊ ಅಪ್‍ ಲೋಡ್ ಮಾಡಿದೆ. ಇದರಲ್ಲಿ ಬುರ್ಖಾಧಾರಿ ಮಹಿಳೆ ಮಾತ್ರವಲ್ಲದೇ, ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿನಿಯರು ಕೂಡಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ.

ಶ್ರೀಲಂಕಾದ ಈ ವಿಡಿಯೊವನ್ನು ‘ಸದ್ಭಾವನೆಯ ಪ್ರತೀಕ’ವನ್ನು ಅಣಕಿಸಲು ಬಳಸಲಾಗಿದೆ. ಭಾರತದಲ್ಲಿ ಮಾನವ ಘನತೆಗೆ ಮತ್ತು ಮುಸ್ಲಿಂ ಮಹಿಳೆಯರ ಪ್ರತಿಷ್ಠೆಗೆ ಯಾವುದೇ ಗೌರವ ಇಲ್ಲ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ.

ಕೃಪೆ: altnews.in

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News