ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಎಚ್.ಡಿ. ದೇವೇಗೌಡ

Update: 2019-03-03 05:45 GMT

ಮಂಗಳೂರು, ಮಾ. 3: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆಯುತ್ತದೆ.‌ ಯಾವುದೇ ಗೊಂದಲವಿಲ್ಲ, ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡುವುದಿಲ್ಲ. 12 ಸ್ಥಾನ ಬಿಟ್ಟುಕೊಡಲು ಹೇಳಿದ್ದೇವೆ. ಆದರೆ ಅಷ್ಟೇ ಕೊಡಬೇಕು ಎಂದು ಹಟ ಹಿಡಿಯುವುದಿಲ್ಲ. ಒಂದಷ್ಟು ಸಡಿಲಿಕೆ ಮಾಡಬೇಕಾಗುತ್ತದೆ. ಅಂತಿಮವಾಗಿ ಹೊಸದಿಲ್ಲಿಯಲ್ಲಿ ಎರಡೂ ಪಕ್ಷದ ರಾಷ್ಟ್ರೀಯ ಮುಖಂಡರು ಚರ್ಚಿಸಿ ಸೀಟು ಹಂಚಿಕೆಯ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. 

ಅವರು ಎಂಎಲ್ ಸಿ ಬಿ.ಎಂ.ಫಾರೂಕ್ ಅವರ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಂಡ್ಯದಿಂದ ಸುಮಲತಾ ಟಿಕೆಟ್‌ ಕೇಳಿರುವುದು ಸ್ವಾಭಾವಿಕ. ಆದರೆ ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿದೆ. ಅದನ್ನು ಕಾಂಗ್ರೆಸ್ ಮುಖಂಡರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದು ಮುಖ್ಯವಲ್ಲ ಮತ್ತು ಆ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಲು‌ ಕಾರ್ಯಕರ್ತರು ಒತ್ತಡ ಹಾಕುತ್ತಿರುವುದು ನಿಜ. ಅಲ್ಲಿನ ಸಂಸದ ವೀರಪ್ಪ ಮೊಯ್ಲಿ ಮೈತ್ರಿ ಬಲಪಡಿಸಲು 28ರ ಪೈಕಿ 10 ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ. ಹಾಗಾಗಿ ಯಾವ ಕ್ಷೇತ್ರವನ್ನು ಕಾಂಗ್ರೆಸ್ ಮುಖಂಡರು ಬಿಟ್ಟುಕೊಡುತ್ತಾರೆ ಅಂತ‌ ಕಾದು ನೋಡಬೇಕು ಎಂದು ಹೇಳಿದರು.

ಮಂಡ್ಯದಲ್ಲಿ ನಿಖಿಲ್, ಹಾಸನದಲ್ಲಿ‌ ಪ್ರಜ್ವಲ್ ಸ್ಪರ್ಧಿಸಲು ಕಾರ್ಯಕರ್ತರು ಬಲವಾದ ಒತ್ತಡ ಹಾಕುತ್ತಿದ್ದಾರೆ. ಕಾರ್ಯಕರ್ತರ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತೇನೆ. ಕಾಂಗ್ರೆಸ್ ಮುಕ್ತ ಭಾರತ, ಪ್ರಶ್ನೆ‌ ಮುಕ್ತ ಸರಕಾರ ಎಂಬ ಪ್ರಧಾನಿ ಮೋದಿಯ ಹೇಳಿಕೆಗೆ ಅರ್ಥವಿಲ್ಲ. ದೇಶಪ್ರೇಮದ ಬಗ್ಗೆ‌ ನಾವು‌ ಮೋದಿಯಿಂದ ಕಲಿಯಬೇಕಾಗಿಲ್ಲ. 5 ವರ್ಷದ ಅಧಿಕಾರವಧಿಯಲ್ಲಿ ಮೋದಿ ದೇಶಕ್ಕೇನು‌ ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಜನತೆ ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಈ ಸಂದರ್ಭ ಬಿಎಂ ಫಾರೂಕ್ ಅವರ ವೇತನವನ್ನು ಅರ್ಹ ಕುಟುಂಬಗಳಿಗೆ ದೇವೇಗೌಡ ಅವರು ವಿತರಣೆ ಮಾಡಿದರು. ಗ್ರಾಂಡ್ ಮುಫ್ತಿಯಾಗಿ ನಿಯುಕ್ತಿಗೊಂಡ ಎಪಿ ಉಸ್ತಾದ್ ಅವರನ್ನು ದೇವೇಗೌಡ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News