ಶ್ರಮಯೋಗಿ ಪಿಂಚಣಿಯಿಂದ ಸ್ವಾಭಿಮಾನದ ಬದುಕು: ವೇದವ್ಯಾಸ ಕಾಮತ್

Update: 2019-03-05 08:11 GMT

ಮಂಗಳೂರು, ಮಾ.5: ದೇಶದಲ್ಲಿ ಬಹು ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಸ್ವಾಭಿಮಾನದ ಬದುಕು ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆ ಆರಂಭಿಸಲಾಗುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ನಗರದ ಕಾರ್ಮಿಕ ಭವನದಲ್ಲಿ ಇಂದು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬೀದಿ ವ್ಯಾಪಾರಿಗಳು, ಬಿಸಿಯೂಟ ಕಾರ್ಮಿಕರು, ತಲೆಹೊರೆ ಕಾರ್ಮಿಕರು, ಇಟ್ಟಿಗೆ ಕೆಲಸಗಾರರು, ಚಮ್ಮಾರರು, ಸ್ಥಳೀಯ ಕಾರ್ಮಿಕರು, ಬಟ್ಟೆ ಒಗೆಯುವವರು, ರಿಕ್ಷಾ, ಭೂಮಿ ರಹಿತ ಕಾರ್ಮಿಕರು, ಕೃಷಿಕರು ಸೇರಿದಂತೆ ಅಸಂಘಟಿತ ಕಾರ್ಮಿಕ ವಲಯವನ್ನು ಕೇಂದ್ರೀಕರಿಸಲಾಗಿರುವ ಈ ಪಿಂಚಣಿ ಯೋಜನೆಯಡಿ 60 ವಯಸ್ಸಿನ ಬಳಿಕ ತಲಾ 3,000 ರೂ.ನಂತೆ ಮಾಸಿಕ ಪಿಂಚಣಿ ಪಡೆಯಲಿದ್ದಾರೆ. ಫಲಾನುಭವಿಗಳು ಮರಣ ಹೊಂದಿದಾಗ ಫಲಾನುಭವಿಗಳ ಸಂಗಾತಿಯು ಶೇ.50ರಷ್ಟು ಪಿಂಚಣಿ ಸ್ವೀಕರಿಸಲು ಅರ್ಹರಾಗಿರುತ್ತಾರೆ ಎಂದು ಅವರು ಹೇಳಿದರು.

ರಾಜ್ಯ ಕಾರ್ಮಿಕ ವಿಮಾ ನಿಗಮದ ನಿರ್ದೇಶಕ ಶಿವರಾಮ ಕೃಷ್ಣನ್ ಮಾತನಾಡಿ, ಬಹುಸಂಖ್ಯೆಯಲ್ಲಿರುವ ಅಸಂಘಟಿತ ವಲಯದ ಸಾಮಾಜಿಕ ಭದ್ರತೆಯ ಭಾಗವಾಗಿ ಈ ಯೋಜನೆ ಜಾರಿಗೆ ಬಂದಿದೆ. ಅರ್ಹ ಫಲಾನುಭವಿಗಳಿಗೆ ಈ ಯೋಜನೆ ತಲುಪುವಂತಾಗಬೇಕು ಎಂದರು.

ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ್ ಮಾತನಾಡಿ, ಶೇ.92ರಷ್ಟಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆ ವರದಾನವಾಗಿದ್ದು, ಅರ್ಹ ಕಾರ್ಮಿಕ ವಲಯ ಇದರ ಪ್ರಯೋಜನ ಪಡೆಯಬೇಕು ಎಂದರು. ಎಪಿಎಫ್‌ಸಿಯ ನೋಡಲ್ ಅಧಿಕಾರಿ ಸಿ. ಮುರಳೀಧರನ್ ಸ್ವಾಗತಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಝಬೆತ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಪಿಂಚಣಿ ಕಾರ್ಡ್ ವಿತರಿಸಲಾಯಿತು.

ಕೇಂದ್ರ ಮಟ್ಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಬೃಹತ್ ಪರದೆಯಲ್ಲಿ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು.

ಇಎಸ್‌ಐಸಿಯ ನೋಡಲ್ ಅಧಿಕಾರಿ ಆರ್. ದಿನಕರನ್ ವಂದಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News