ಮಂಗಳೂರು: ಮಹಿಳಾ ಕಾಂಗ್ರೆಸ್ ಬೈಕ್ ರ್ಯಾಲಿಗೆ ಪೊಲೀಸರ ತಡೆ

Update: 2019-03-05 15:08 GMT

ಮಂಗಳೂರು, ಮಾ.5: ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಬೈಕ್ ರ್ಯಾಲಿಗೆ ಮಂಗಳೂರು ನಗರ ಪೊಲೀಸರು ತಡೆಹಿಡಿದಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಾ.6ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಜರುಗಲಿರುವ ಬೃಹತ್ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿಯಾಗಿ ಮಹಿಳಾ ಕಾಂಗ್ರೆಸ್‌ನಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಪೊಲೀಸ್ ಇಲಾಖೆ ಅನುಮತಿ ನೀಡದಿದ್ದ ಹಿನ್ನೆಲೆ ಬೈಕ್ ರ್ಯಾಲಿ ರದ್ದುಗೊಂಡಿದೆ.

ರ್ಯಾಲಿ ರದ್ದುಗೊಂಡ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಶಾಲೆಟ್ ಪಿಂಟೊ, ಮಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಟ್ಟಿನಲ್ಲಿ ರ್ಯಾಲಿ ಮಾಡಬಾರದಂತೆ ಪೊಲೀಸರು ಸೂಚಿಸಿದ ಬೆನ್ನಲ್ಲೆ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.

ಬಿಜೆಪಿಯ ವೈಫಲ್ಯತೆಯನ್ನು ಜಿಲ್ಲೆಯ ಜನರಿಗೆ ತಿಳಿಸಲು ಹಾಗೂ ಮಹಿಳೆಯರನ್ನು ಇನ್ನಷ್ಟು ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರುವಂತೆ ಪ್ರೇರೇಪಿಸಲು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ರ್ಯಾಲಿ ರದ್ದಾಗಿರುವ ಕಾರಣ ಜಿಲ್ಲೆಯ ಜನತೆಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ಕ್ಷಮೆಯಾಚಿಸಲಿದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚು ಸ್ಥಾನಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ಮುಂದಿನ ಬಾರಿ ರಾಹುಲ್‌ ಗಾಂಧಿಯನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ದುಡಿಯಲಿದ್ದಾರೆ. ಬೃಹತ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿಸಲು ಮುಂದಾಗುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News