ಚುನಾವಣೆಯ ವೇಳೆ ಐ.ಟಿ.ದಾಳಿ ಪ್ರಕರಣ: ರಮಾನಾಥ ರೈ ಸಹಿತ ಆರು ಮುಂದಿಯ ವಿರುದ್ದ ಕೇಸು ದಾಖಲು‌

Update: 2019-03-05 15:59 GMT

ಮಂಗಳೂರು, ಮಾ. 5: 2018ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಲಾಡ್ಜೊಂದಕ್ಕೆ ಹಾಗೂ ವ್ಯಕ್ತಿಯೊಬ್ಬರ ಕಚೇರಿಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 62 ಲಕ್ಷ ರೂ. ನಗದು ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಹಶೀಲ್ದಾರ್ ಅವರ ಲಿಖಿತ ದೂರಿನನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಸಹಿತ ಆರು ಮಂದಿಯ ವಿರುದ್ಧ ಪ್ರಕರಣ ಮಂಗಳವಾರ ದಾಖಲಾಗಿದೆ.

ಬೆಂಗಳೂರು ನಿರ್ಮಾಣ ಕನ್ಸ್ಟ್ರಕ್ಷನ್‍ನ  ಉದಯ ಹೆಗ್ಗಡೆ ಬೆಂಗಳೂರು, ಪದವಿನಂಗಡಿಯ ಸುಧಾಕರ ಶೆಟ್ಟಿ ಮುಗರೋಡಿ, ಮುಗರೋಡಿ ಕನ್ಸ್ಟ್ರಕ್ಷನ್‍ನ ಅಕೌಂಟೆಂಟ್ ವರುಣ, ಮುಗರೋಡಿ ಕನ್ಸ್ಟ್ರಕ್ಷನ್‍ನ ಸಿಬ್ಬಂದಿ ಪ್ರೀತೇಶ್ ದೇವಾಡಿಗ, ಡೆಂಝಿಲ್ ಹರ್ಮಾನ್ ಬಂಟ್ವಾಳ ಹಾಗೂ ಮಾಜಿ ಸಚಿವ ರಮಾನಾಥ ರೈ ಅವರ ವಿರುದ್ಧ ಬಂಟ್ವಾಳ ತಹಶೀಲ್ದಾರ್ ಸಣ್ಣ ರಂಗಯ್ಯ ಅವರ ದೂರಿನಂತೆ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: 2018ನೆ ಸಾಲಿನ ವಿಧಾನಸಭಾ ಚುನಾವಣೆಗೆ ಮುನ್ನ ಆದಾಯ ತೆರಿಗೆ ಆಧಿಕಾರಿಗಳು ಖಚಿತ ಮಾಹಿತಿಯಂತೆ ಸುಧಾಕರ ಶೆಟ್ಟಿಯವರ ಕಚೇರಿಗೆ ದಾಳಿ ನಡೆಸಿ ರೂ. 22 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದರು. ಹಾಗೆಯೆ ಬಿ.ಸಿ ರೋಡ್‍ನ ಶ್ರೀನಿವಾಸ್ ವಸತಿಗೃಹಕ್ಕೆ ದಾಳಿ ಮಾಡಿ ಡೆನ್ಸಿಲ್ ಹರ್ಮನ್‍ನಿಂದ 40 ಲಕ್ಷ ರೂ. ವನ್ನು ವಶಪಡಿಕೊಂಡಿದ್ದರು.

ಈ ಸಂದರ್ಭ ಆದಾಯ ತೆರಿಗೆ ಇಲಾಖಾಧಿಕಾರಿಗಳು ಒಟ್ಟು 62 ಲಕ್ಷ ರೂ. ವನ್ನು ಸ್ವಾಧೀನಪಡಿಸಿಕೊಂಡು ವಿಚಾರಣೆ ನಡೆಸಿದಾಗ 2018ನೆ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಸಾರ್ವಜನಿಕರಿಗೆ ಹಣವನ್ನು ಹಂಚುವ ಉದ್ದೇಶದಿಂದ ಇವರೆಲ್ಲರೂ ಕಾನೂನುಬಾಹಿರವಾಗಿ ವ್ಯವಹಾರ ನಡೆಸಿರುವುದು ಕಂಡುಬಂದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು, ದ.ಕ. ಜಿಲ್ಲಾಧಿಕಾರಿಯವರಿಗೆ  ವರದಿ ಸಲ್ಲಿಸಿದ್ದು, ಇದರೊಂದಿಗೆ ಸ್ವಾಧೀನಪಡಿಸಿಕೊಂಡ ನಗದು ಹಾಗೂ ದಾಖಲಾತಿಗಳನ್ನು ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಲಾಗಿತ್ತು.

ಇದೀಗ ಜಿಲ್ಲಾಧಿಕಾರಿಯವರ ಆದೇಶದಂತೆ ಬಂಟ್ವಾಳ ತಹಶೀಲ್ದಾರ್ ಅವರು ಬಂಟ್ವಾಳ ಎಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ಅನುಮತಿಯನ್ನು ಪಡೆದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News