ನೂತನವಾಗಿ ನಿರ್ಮಾಣಗೊಂಡ ಕಾಲೇಜು ತರಗತಿ ಕಟ್ಟಡಗಳ ಲೋಕಾರ್ಪಣ

Update: 2019-03-05 18:31 GMT

ಉಳ್ಳಾಲ: ದೇಶಕ್ಕೆ ಕವಿದಿರತಕ್ಕಂತಹ ಗ್ರಹಣ ಹಾಗೂ ಕಾರ್ಮೊಡ ತಿಳಿಯಾಗಿದೆ. ಸೂರ್ಯನ ಬೆಳಕು ಪ್ರಖರಗೊಳ್ಳುತ್ತಿದೆ. ಆ ಕಾರಣಕ್ಕೆ ದೇಶದ ಸೇನೆ ಮತ್ತು ನಾಯಕತ್ವ ಅಭಿನಂದನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಅವರು ಮಂಗಳೂರು ರಥಬೀದಿಯ ಡಾ. ಪಿ.ದಯಾನಂದ ಪೈ, ಪಿ. ಸತೀಶ್ ಪೈ, ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೇಂದ್ರ ಸರಕಾರದ ರೂಸಾ ಅನುದಾನದಡಿ ನೂತನವಾಗಿ ನಿರ್ಮಾಣಗೊಂಡ ಕಾಲೇಜು ತರಗತಿ ಕಟ್ಟಡಗಳ ಲೋಕಾರ್ಪಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಭಾರತ ಯುವಜನತೆಯ ದೇಶ. ಯುವಶಕ್ತಿಗೆ ಸೂಕ್ತ ಮಾರ್ಗದರ್ಶನ ಸಿಕ್ಕಿದಾಗ ದೇಶ ಅಭಿವೃದ್ಧಿಯಾಗುತ್ತದೆ. ಅ ಮೂಲಕ ಸ್ವಾಮಿ ವಿವೇಕಾನಂದರ ಕನಸನ್ನು ನನಸು ಮಾಡುವಲ್ಲಿ , ಭಾರತ ಜಗದ್ಗುರು ಆಗಬೇಕು ಎಂಬ ಸಂಕಲ್ಪವನ್ನು ನಾವು ಮಾಡಬೇಕಾಗಿದೆ.  

ಒಂದೊಮ್ಮೆ ಜಗತ್ತು ಅನಾಗರೀಕವಾಗಿದ್ದಾಗ ಭಾರತದಲ್ಲಿ ಉನ್ನತ ಶಿಕ್ಷಣವಿತ್ತು, ಜೀವನದ ಯಶಸ್ಸಿಗೆ ಸಾಂಸ್ಕೃತಿಕ ಭಾರತದಲ್ಲಿ 64 ಬಗೆಯ ಶಿಕ್ಷಣ ದೊರೆಯುತ್ತಿತ್ತು. ಸಮಸ್ಯೆಗಳನ್ನು ಎದುರಿಸುವಲ್ಲಿ  ಮಾನಸಿಕ ಸ್ಥೈರ್ಯವಿತ್ತು. ಪ್ರಸ್ತುತ ಮೆಕಾಲೆಯ ಗಳಿಕೆಯ ಶಿಕ್ಷಣ ಈ ದೇಶದಲ್ಲಿ ಶ್ರೀಮಂತ ಬಡವ ಎಂಬ ತಾರತಮ್ಯಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಯುವ ಜನತೆ ಮಾನಸಿಕ ಸ್ಥೈರ್ಯವನ್ನು ಕಳೆದುಕೊಂಡಿದ್ದಾರೆ. ಆದುದರಿಂದ ಶಿಕ್ಷಣದಲ್ಲಿ  ಬದಲಾವಣೆ ಆಗಬೇಕಾಗಿದೆ. ಇಂದು ಶಿಕ್ಷಣ ಜ್ಞಾನಕ್ಕೋಸ್ಕರ ಸಿಕ್ಕಾಗ ಮಾತ್ರ ಯುವ ಜನತೆಯು ನಮ್ಮ ದೇಶವನ್ನ ಜಗದ್ಗುರು ಮಾಡುವಲ್ಲಿ ಸಂದೇಹವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ವಹಿಸಿದ್ದರು. 

ನಿವೃತ್ತ ಪ್ರಾಧ್ಯಾಪಕ ಪ್ರೊ. ಶ್ರೀಪತಿ ರಾವ್, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿ ವಿಶೇಷ ಅ„ಕಾರಿ ಡಾ. ಶ್ರೀಧರ ಮಣಿಯಾಣಿ, ಪಾಂಡುರಂಗ ನಾಯಕ್ ಮುಖ್ಯ ಅತಿಥಿಗಳಾಗಿದ್ದರು. 
ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಶಿವರಾಮ್ ಪಿ., ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ನವೀನ್ ಕೊಣಾಜೆ, ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಸುಧಾಕರನ್, ವಾಣಿಜ್ಯ ವಿಭಾಗ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ನಾಗರಾಜ ಮಾನ್ಯ ಹಾಗೂ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. 

ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ಪ್ರಕಾಶ್‍ಚಂದ್ರ ಶಿಶಿಲ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರೊ. ಅಪ್ಪು ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News