ಮಾರ್ಚ್ 1ರಿಂದ 31ವರೆಗೆ ಬಿಸಿಸಿಐಯಿಂದ ಸದಸ್ಯತ್ವ ಅಭಿಯಾನ

Update: 2019-03-06 10:14 GMT

ಮಂಗಳೂರು: ಬ್ಯಾರಿ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ಎರಡು ವರ್ಷದ ಹಿಂದೆ ಸ್ಥಾಪನೆಗೊಂಡಿರುವ ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಸದಸ್ಯತ್ವ ಅಭಿಯಾನವನ್ನು ಆರಂಭಿಸಿದೆ. ಮಾರ್ಚ್ 1ರಿಂದ ಆರಂಭಗೊಂಡಿರುವ ಈ ಅಭಿಯಾನವು ಮಾರ್ಚ್ 31ರವರೆಗೆ ನಡೆಯಲಿದೆ.

ಬ್ಯಾರಿ ಉದ್ಯಮಿಗಳ ಮಧ್ಯೆ ಪರಸ್ಪರ ಸಂವಹನ ಕಲ್ಪಿಸಬೇಕು ಮತ್ತು ಬ್ಯಾರಿ ಯುವ ಜನಾಂಗವು ವ್ಯಾಪಾರ, ವಾಣಿಜ್ಯ, ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡು ಪ್ರಗತಿ ಹೊಂದಬೇಕು, ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಸ್ಥಾಪಿಸಲಾದ ಬಿಸಿಸಿಐ ಈಗಾಗಲೆ ಜಿಎಸ್‌ಟಿ ಬಗ್ಗೆ ಮಾಹಿತಿ ಶಿಬಿರ, ಸರಕಾರಿ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ, ಬ್ಯಾರಿ ಮೇ ಇತ್ಯಾದಿ ಆಯೋಜಿಸಿ ಗಮನ ಸೆಳೆದಿದೆ.

ಹೆಚ್ಚಿನ ಬ್ಯಾರಿ ಯುವಕರಿಗೆ ವ್ಯಾಪಾರ-ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುತ್ತದೆ. ಆದರೆ, ಉದ್ಯಮಕ್ಕೆ ಹೂಡಲು ಬಂಡವಾಳ ಇರುವುದಿಲ್ಲ. ಬಂಡವಾಳ ಇದ್ದರೂ ಕೆಲವರಿಗೆ ಮಾಹಿತಿ ಇರುವುದಿಲ್ಲ. ಇದರಿಂದಾಗಿ ಬ್ಯಾರಿ ಸಮುದಾಯದಲ್ಲಿ ಉದ್ಯಮಕ್ಕೆ ಇಳಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆ ಹಿನ್ನ್ನೆಲೆಯಲ್ಲಿ ಬಿಸಿಸಿಐ ಉದ್ಯಮ ಸ್ಥಾಪನೆಗೆ ಯುವಕರಿಗೆ ಪ್ರೋತ್ಸಾಹ, ಮಾರ್ಗದರ್ಶನ, ನೆರವು ನೀಡಲಿದೆ. ಈಗಾಗಲೆ ಹಲವರಿಗೆ ಎಲ್ಲ ರೀತಿಯ ಸಹಕಾರ ನೀಡಿದೆ ಎಂದು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ತಿಳಿಸಿದ್ದಾರೆ.

ಸದಸ್ಯತ್ವ ಅಭಿಯಾನದ ಮೂಲಕ ಮುಂದಿನ 20 ವರ್ಷಗಳಲ್ಲಿ ಕನಿಷ್ಠ 50 ಸಾವಿರ ಬ್ಯಾರಿ ಉದ್ಯಮಿಗಳನ್ನು ಸೃಷ್ಟಿಸುವ ಗುರಿಯನ್ನು ಬಿಸಿಸಿಐ ಹೊಂದಿದೆ. ಸದಸ್ಯತ್ವ ಹೊಂದಿದ ಸದಸ್ಯರಿಗೆ ವ್ಯವಹಾರ ವೃದ್ಧಿ ಮತ್ತು ವಿಸ್ತರಣೆಗೆ ಅವಕಾಶ, ಬಿಸಿಸಿಐ ಡೈರಕ್ಟರಿಯಲ್ಲಿ ನೋಂದಣಿ, ಉದ್ಯಮದಿಂದ ಉದ್ಯಮಕ್ಕೆ ವಿಕಸನ, ಆರ್ಥಿಕ ನೆರವು, ವ್ಯವಹಾರ ಸಮಸ್ಯೆಗಳಾದಾಗ ನೆರವು, ಹೊಸ ಉದ್ಯಮ ಸ್ಥಾಪನೆಗೆ ಅವಕಾಶ, ಸರಕಾರಿ ನೀತಿ ರೂಪಿಸಲು ಪೂರಕ ಪ್ರಯತ್ನ ಮಾಡುವುದು, ಹೊಸ ಘಟಕ ಸ್ಥಾಪನೆಗೆ ಮಾರ್ಗದರ್ಶನ, ಕಾರ್ಮಿಕ ಕಾಯ್ದೆಯ ಬಗ್ಗೆ ಮಾಹಿತಿ, ಯೋಜನಾ ವರದಿ ಸಿದ್ಧಪಡಿಸಲು ನೆರವು, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ, ಪರವಾನಿಗೆ ಪಡೆಯಲು ನೆರವು, ಕೈಗಾರಿಕಾ ನೀತಿಯ ಬಗ್ಗೆ ಮಾಹಿತಿ, ಸಬ್ಸಿಡಿ ಬಗ್ಗೆ ಮಾಹಿತಿ, ಹೂಡಿಕೆ ಬಗ್ಗೆ ಮಾಹಿತಿ, ಮಾರುಕಟ್ಟೆ ಸೃಜನಕ್ಕೆ ನೆರವು ಇತ್ಯಾದಿ ಪ್ರಯೋಜನವಾಗಲಿದೆ.

ಸದಸ್ಯತ್ವ ಬಯಸುವವರು ಬಿಸಿಸಿಐ, ವಿಶ್ವಾಸ್ ಕ್ರೌನ್, ಹಳೆ ಕಂಕನಾಡಿ ಬೈಪಾಸ್ ರಸ್ತೆ, ಮಂಗಳೂರು (ಮೊ.ಸಂ: 9535563897, 0824-4262323) bearyschamber@gmail.com ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News