ಟ್ರಂಪ್‌ ರ ತುರ್ತು ಪರಿಸ್ಥಿತಿ ಆದೇಶ ತಿರಸ್ಕರಿಸಲು ಸೆನೆಟ್ ಸಜ್ಜು

Update: 2019-03-06 15:52 GMT

ವಾಶಿಂಗ್ಟನ್, ಮಾ. 6: ಮೆಕ್ಸಿಕೊ ಗಡಿಯುದ್ದಕ್ಕೂ ಗೋಡೆ ನಿರ್ಮಿಸುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಗೆ ಹಣ ಸಂಗ್ರಹಿಸುವುದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ತುರ್ತು ಪರಿಸ್ಥಿತಿಯನ್ನು ತಿರಸ್ಕರಿಸುವ ನಿರ್ಣಯವೊಂದನ್ನು ಸಂಸತ್ತು ಕಾಂಗ್ರೆಸ್ ಅಂಗೀಕರಿಸಲು ಸಜ್ಜಾಗಿದೆ.

ಟ್ರಂಪ್‌ರ ರಿಪಬ್ಲಿಕನ್ ಪಕ್ಷದ ಪ್ರಾಬಲ್ಯದ ಸೆನೆಟ್ ಕೂಡ ನಿರ್ಣಯದ ಪರವಾಗಿ ಮತ ಹಾಕುವುದು ಖಚಿತವಾಗಿದೆ.

‘‘ತುರ್ತು ಪರಿಸ್ಥಿತಿಗೆ ಅಸಮ್ಮತಿ ಸೂಚಿಸುವ ನಿರ್ಣಯ ಅಂಗೀಕಾರಕ್ಕೆ ಸೆನೆಟ್‌ನಲ್ಲಿ ಸಾಕಷ್ಟು ಮತಗಳು ಲಭಿಸುವುದು ಸ್ಪಷ್ಟವಾಗಿದೆ’’ ಎಂದು ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷದ ಹಿರಿಯ ನಾಯಕ ಮಿಚ್ ಮೆಕ್‌ಕೊನೆಲ್ ಹೇಳಿದರು. ‘‘ಬಳಿಕ ಈ ನಿರ್ಣಯಕ್ಕೆ ಅಧ್ಯಕ್ಷರು ತಡೆ (ವೀಟೊ) ಹಾಕುತ್ತಾರೆ. ಬಳಿಕ, ಹೌಸ್ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್)ನಲ್ಲಿ ವೀಟೊವನ್ನು ಎತ್ತಿಹಿಡಿಯುವ ಸಾಧ್ಯತೆಯೇ ಅಧಿಕ’’ ಎಂದರು.

ಪ್ರತಿಪಕ್ಷ ಡೆಮಾಕ್ರಟಿಕನ್ನರ ಪ್ರಾಬಲ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಈ ನಿರ್ಣಯವನ್ನು ಈಗಾಗಲೇ ಅಂಗೀಕರಿಸಲಾಗಿದೆ. ಸೆನೆಟ್ ಈ ನಿರ್ಣಯವನ್ನು ಮುಂದಿನ ವಾರ ಅಂಗೀಕರಿಸುವ ನಿರೀಕ್ಷೆಯಿದೆ.

ಮೆಕ್‌ಕೊನೆಲ್ ಹೇಳಿದಂತೆ, ಈ ನಿರ್ಣಯಕ್ಕೆ ಟ್ರಂಪ್ ವೀಟೊ ಚಲಾಯಿಸಬಹುದಾಗಿದೆ ಹಾಗೂ ಅವರು ಚಲಾಯಿಸುತ್ತಾರೆ. ಇದನ್ನು ತೆರವುಗೊಳಿಸಬೇಕಾದರೆ, ಅಮೆರಿಕ ಕಾಂಗ್ರೆಸ್‌ನ ಎರಡೂ ಸದನಗಳು (ಹೌಸ್ ಮತ್ತು ಸೆನೆಟ್) ಮೂರನೇ ಎರಡು ಬಹುಮತವನ್ನು ಹೊಂದಬೇಕು. ಆದರೆ, ಇದು ಅಸಂಭವ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News